Saturday, July 4, 2026
Google search engine

Homeದೇಶದೆಹಲಿಯಲ್ಲಿ ಎಫ್‌ಎಸ್‌ಎಸ್‌ಎಐ ದಾಳಿ : 50 ಸಾವಿರಕ್ಕೂ ಹೆಚ್ಚು ಶಂಕಿತ ಆಹಾರದ ಪ್ಯಾಕೆಟ್‌ಗಳು ಜಪ್ತಿ

ದೆಹಲಿಯಲ್ಲಿ ಎಫ್‌ಎಸ್‌ಎಸ್‌ಎಐ ದಾಳಿ : 50 ಸಾವಿರಕ್ಕೂ ಹೆಚ್ಚು ಶಂಕಿತ ಆಹಾರದ ಪ್ಯಾಕೆಟ್‌ಗಳು ಜಪ್ತಿ

ನವದೆಹಲಿ : ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಕಲಬೆರಕೆ ಮತ್ತು ನಕಲಿ ಲೇಬಲ್ ಹೊಂದಿರುವ ಆಹಾರ ಉತ್ಪನ್ನಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಭಾರೀ ಕಾರ್ಯಾಚರಣೆ ನಡೆಸಿದೆ. ನೈಋತ್ಯ ದೆಹಲಿಯ ಆಹಾರ ಉದ್ಯಮಿಯೊಬ್ಬರ ಆವರಣದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, 50 ಸಾವಿರಕ್ಕೂ ಹೆಚ್ಚು ಶಂಕಿತ ಆಹಾರದ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಹಸ್ಯ ಮಾಹಿತಿಯ ಆಧಾರದ ಮೇಲೆ ಜಂಟಿ ಕಾರ್ಯಾಚರಣೆ

ಲಭ್ಯವಾದ ಖಚಿತ ರಹಸ್ಯ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ವಿವಿಧ ಬ್ರ್ಯಾಂಡ್‌ಗಳ ಆಹಾರ ಮತ್ತು ಆಹಾರೇತರ ಉತ್ಪನ್ನಗಳ ತಯಾರಿಕಾ ದಿನಾಂಕ (Manufacturing Date), ಅವಧಿ ಮುಗಿಯುವ ದಿನಾಂಕ (Expiry Date), ಬ್ಯಾಚ್ ನಂಬರ್ ಮತ್ತು ಇತರ ಲೇಬಲ್ ವಿವರಗಳನ್ನು ಕಾನೂನುಬಾಹಿರವಾಗಿ ಬದಲಾಯಿಸುತ್ತಿರುವುದು ಪತ್ತೆಯಾಗಿದೆ. ಮಾರುಕಟ್ಟೆಯಲ್ಲಿ ಗ್ರಾಹಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ಉತ್ಪನ್ನಗಳ ಮೇಲೆ ಸುಳ್ಳು ಮಾಹಿತಿ ಮುದ್ರಿಸಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಸ್ಟ್ಯಾಂಪ್, ಸಾಲ್ವೆಂಟ್ ಮತ್ತು ಪ್ರಿಂಟಿಂಗ್ ಯಂತ್ರಗಳ ವಶ

ಪರಿಶೀಲನೆಯ ಸಂದರ್ಭದಲ್ಲಿ ಅಧಿಕಾರಿಗಳು ಆವರಣದಿಂದ ಸ್ಟ್ಯಾಂಪ್‌ಗಳು, ರಾಸಾಯನಿಕ ಸಾಲ್ವೆಂಟ್‌ಗಳು ಮತ್ತು ಲೇಬಲ್ ಮುದ್ರಿಸಲು ಬಳಸಲಾಗುತ್ತಿದ್ದ ಪ್ರಿಂಟಿಂಗ್ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಉತ್ಪನ್ನಗಳ ಅಸಲಿ ಲೇಬಲ್‌ಗಳನ್ನು ಅಳಿಸಿ, ಅವುಗಳ ಮೇಲೆ ನಕಲಿ ಮಾಹಿತಿ ಮುದ್ರಿಸಲು ಇವುಗಳನ್ನು ಬಳಸಲಾಗುತ್ತಿತ್ತು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ

ಆಹಾರ ಕಲಬೆರಕೆ, ದಾರಿ ತಪ್ಪಿಸುವ ಲೇಬಲಿಂಗ್ ಮತ್ತು ಗ್ರಾಹಕರ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ಉಲ್ಲಂಘನೆಗಳ ವಿರುದ್ಧ ತಾನು ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಯನ್ನು ಹೊಂದಿರುವುದಾಗಿ ಎಫ್‌ಎಸ್‌ಎಸ್‌ಎಐ ಸ್ಪಷ್ಟಪಡಿಸಿದೆ. ತಪ್ಪಿತಸ್ಥರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಮತ್ತು ಇತರ ಸಂಬಂಧಿತ ಕಾನೂನು ನಿಬಂಧನೆಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

ಶಂಕಿತ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಕರೆ

ಯಾವುದೇ ನಕಲಿ ಬ್ರ್ಯಾಂಡ್ ಅಥವಾ ಶಂಕಿತ ಆಹಾರ ಉತ್ಪನ್ನಗಳ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ ‘ಫುಡ್ ಸೇಫ್ಟಿ ಕನೆಕ್ಟ್’ (Food Safety Connect) ಮೊಬೈಲ್ ಆಪ್ ಅಥವಾ ‘ಫೋಸ್ಕೋಸ್’ (FoSCoS) ದೂರು ನಿವಾರಣಾ ಪೋರ್ಟಲ್ ಮೂಲಕ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಎಫ್‌ಎಸ್‌ಎಸ್‌ಎಐ ಮನವಿ ಮಾಡಿದೆ. ಇದರಿಂದ ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸಿಸ್)

RELATED ARTICLES
- Advertisment -
Google search engine

Most Popular