ಹೊಸದಿಲ್ಲಿ: ಸಿಎನ್‌ಜಿ ದರವನ್ನು ಮಂಗಳವಾರ ಮತ್ತೆ ಪ್ರತಿ ಕೆಜಿಗೆ 2 ರೂ. ಹೆಚ್ಚಿಸಲಾಗಿದ್ದು, ಕಳೆದ 11 ದಿನಗಳಲ್ಲಿ ಇದು ನಾಲ್ಕನೇ ದರ ಏರಿಕೆಯಾಗಿದೆ. ಈ ಅವಧಿಯಲ್ಲಿ ಒಟ್ಟು 7 ರೂ. ಹೆಚ್ಚಳ ಕಂಡಿದೆ.
ಹೊಸ ದರ ಮೇ 26ರ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬಂದಿದೆ. ಇದರೊಂದಿಗೆ ದಿಲ್ಲಿಯಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ 83.90 ರೂ. ಆಗಿದೆ. ಮಂಗಳೂರಿನ ಸ್ಥಳೀಯ ಪಂಪ್‌ಗಳಲ್ಲಿ ಸಿಎನ್‌ಜಿ ದರ 92 ರೂ. ತಲುಪಿದೆ. ಮೇ 15ರಂದು 2 ರೂ., ಬಳಿಕ 1 ರೂ. ಹಾಗೂ ಮತ್ತೆ 1 ರೂ. ಏರಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ 2 ರೂ. ಹೆಚ್ಚಳವಾಗಿದೆ.
ಜಾಗತಿಕ ಕಚ್ಚಾ ತೈಲ ದರ ಏರಿಕೆ ಹಾಗೂ ಅಮೆರಿಕ–ಇರಾನ್ ಸಂಘರ್ಷದಿಂದ ಹಾರ್ಮುಝ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡಚಣೆ ಉಂಟಾಗುವ ಭೀತಿ ಹಿನ್ನೆಲೆ ತೈಲ ಮಾರುಕಟ್ಟೆಯಲ್ಲಿ ಒತ್ತಡ ಹೆಚ್ಚಾಗಿದೆ ಎಂದು ಕೈಗಾರಿಕಾ ಮೂಲಗಳು ತಿಳಿಸಿವೆ.



