ರಾಮದುರ್ಗ : ತಾಲೂಕಿನ ವೀರಭದ್ರೇಶ್ವರ ಹಾಗೂ ಸಾಲಾಪೂರ ಬಸವೇಶ್ವರ ಏತ ನೀರಾವರಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಸಾಲಹಳ್ಳಿ ಗ್ರಾಮದಲ್ಲಿ ಬೆಳಗಾವಿ–ರಾಯಚೂರು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಸಾವಿರಾರು ರೈತರು ಭಾರೀ ಪ್ರತಿಭಟನೆ ನಡೆಸಿದರು.
ನೀರಾವರಿ ಯೋಜನೆಗಳ ವ್ಯಾಪ್ತಿಯ ಗ್ರಾಮಗಳ ರೈತರು ಹಾಗೂ ರೈತ ಮುಖಂಡರು ದೊಡ್ಡ ಸಂಖ್ಯೆಯಲ್ಲಿ ಸೇರಿ ಕಾಮಗಾರಿಗಳ ವಿಳಂಬದ ವಿರುದ್ಧ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೂ ಮುನ್ನ ಗೊಡಚಿ ವೀರಭದ್ರೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿ, ಸಾಲಹಳ್ಳಿಯಲ್ಲಿ ನಿರ್ಮಿಸಲಾದ ಪ್ರತಿಭಟನಾ ವೇದಿಕೆಯಲ್ಲಿ ಸಮಾವೇಶಗೊಂಡರು.
ಈ ವೇಳೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಶಶಿಕಾಂತ ಗೂರೂಜಿ, ಶಾಸಕ ಅಶೋಕ ಪಟ್ಟಣ ಅವರು ಮುಖ್ಯಮಂತ್ರಿಗಳ ಗಮನಕ್ಕೆ ವಿಷಯ ತಂದು ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ನಿರಂತರ ವಿಳಂಬವನ್ನು ರೈತರು ಇನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಜನರ ಸಮಸ್ಯೆ ಪರಿಹರಿಸಲು ಆಯ್ಕೆಯಾದ ಜನಪ್ರತಿನಿಧಿಗಳು ರೈತರ ಹಿತದ ಬಗ್ಗೆ ನಿರ್ಲಕ್ಷ್ಯ ತೋರಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ಸರ್ಕಾರಕ್ಕೆ ಉಚಿತ ಯೋಜನೆಗಳಿಗೆ ಹಣವಿದ್ದರೂ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂದು ಟೀಕಿಸಿದರು. ಶಾಸಕ ಅಶೋಕ ಪಟ್ಟಣ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಲಿಖಿತ ಭರವಸೆ ಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಅನ್ಯಾಯವಾಗಿದೆ. ಇಚ್ಛಾಶಕ್ತಿಯ ಕೊರತೆಯಿಂದ ನೀರಾವರಿ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂದು ಅಭಿಪ್ರಾಯಪಟ್ಟರು. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಗೆ ವಿವಿಧ ಮಠಾಧೀಶರು ಎಂ.ಚಂದರಗಿಯ ವೀರಭದ್ರೇಶ್ವರ ಸ್ವಾಮೀಜಿ, ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಟಕೋಳದ ಸಚ್ಚಿದಾನಂದ ಸ್ವಾಮೀಜಿ, ಬನ್ನೂರ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗದ ಶಾಂತವೀರ ಸ್ವಾಮೀಜಿ, ಹೊಸಕೋಟಿಯ ಅಭಿನವ ರೇವಯ್ಯ ಸ್ವಾಮೀಜಿ, ಕುಳ್ಳೂರಿನ ಬಸವಾನಂದ ಭಾರತಿ ಸ್ವಾಮೀಜಿ, ಸಾಲಹಳ್ಳಿಯ ಅಭಿನವ ಸಿದ್ದಲಿಂಗೇಶ್ವರ ಸ್ವಾಮೀಜಿ, ಬೀಡಕಿಯ ಗಂಗಾಧರ ಸ್ವಾಮೀಜಿ, ಕಟಕೋಳದ ಸಿದ್ರಾಯಜ್ಜನವರು, ಬಟಕುರ್ಕಿಯ ರೇವಯ್ಯ ಸ್ವಾಮೀಜಿ, ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ತೊಂಡಿ ಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು, ಹರ್ಲಾಪೂರದ ರೇಣುಕ ಶಿವಯೋಗಿ ಶಿವಾಚಾರ್ಯರು, ನಾಗನೂರಿನ ಬಸವಗೀತಾ ತಾಯಿ ಬೆಂಬಲ ಸೂಚಿಸಿದರು.
ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಲ್ಲಣ್ಣ ಯಾದವಾಡ, ಬಿಜೆಪಿ ಮಂಡಲ ಅಧ್ಯಕ್ಷ ಡಾ.ಕೆ.ವಿ.ಪಾಟೀಲ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ, ಶಿವಾನಂದ ದೊಡವಾಡ, ವೈ.ಎಚ್. ಪಾಟೀಲ, ಮಾರುತಿ ಕೊಪ್ಪದ, ರೈತ ಸಂಘದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ರೈತ ಸಂಘ ಹಾಗೂ ವಿವಿಧ ರೈತಪರ ಸಂಘಟನೆಗಳ ಪದಾಧಿಕಾರಿ ಗಳು, ರೈತ ಮುಖಂಡರು ಸೇರಿದಂತೆ ಇತರರಿದ್ದರು.



