Friday, July 10, 2026
Google search engine

Homeರಾಜ್ಯಅನಧಿಕೃತ ವಾಹನಗಳ ವಿರುದ್ಧ ಕಠಿಣ ಕ್ರಮ: ಒಂದು ವಾರ ಗಡುವು, ಬಳಿಕ ಟೋಯಿಂಗ್ ಮತ್ತು ಹರಾಜು

ಅನಧಿಕೃತ ವಾಹನಗಳ ವಿರುದ್ಧ ಕಠಿಣ ಕ್ರಮ: ಒಂದು ವಾರ ಗಡುವು, ಬಳಿಕ ಟೋಯಿಂಗ್ ಮತ್ತು ಹರಾಜು

ಬೆಂಗಳೂರು: ಪಾದಚಾರಿ ಮಾರ್ಗಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯ ನಂತರ ಇದೀಗ ನಗರದ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಿರುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದ್ದಾರೆ. ಕ್ವೀನ್ಸ್ ರಸ್ತೆಯಲ್ಲಿ ಅನಧಿಕೃತವಾಗಿ ನಿಲ್ಲಿಸಲಾಗಿದ್ದ ವಾಹನಗಳಿಗೆ ನೋಟಿಸ್ ಅಂಟಿಸುವ ಮೂಲಕ ಅವರು ಕಾರ್ಯಾಚರಣೆಗೆ ಚಾಲನೆ ನೀಡಿದರು. ಈ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿಕೊಂಡು ದೀರ್ಘಕಾಲದಿಂದ ಬಿಟ್ಟುಹೋಗಿರುವ ವಾಹನಗಳನ್ನು ತೆರವುಗೊಳಿಸುವಂತೆ 15 ದಿನಗಳ ಹಿಂದೆಯೇ ಸೂಚನೆ ನೀಡಲಾಗಿತ್ತು. ಆದರೂ ಮಾಲೀಕರು ಸ್ಪಂದಿಸದ ಹಿನ್ನೆಲೆಯಲ್ಲಿ ಇದೀಗ ಕಟ್ಟುನಿಟ್ಟಿನ ಕ್ರಮ ಆರಂಭಿಸಲಾಗಿದೆ.

ನಗರದಲ್ಲಿ ಅನಧಿಕೃತವಾಗಿ ನಿಲ್ಲಿಸಲಾಗಿರುವ 1,581 ವಾಹನಗಳನ್ನು ಪೊಲೀಸ್ ಇಲಾಖೆ ಈಗಾಗಲೇ ಗುರುತಿಸಿದೆ. ಈ ವಾಹನಗಳ ಮಾಲೀಕರಿಗೆ ಒಂದು ವಾರದ ಗಡುವು ನೀಡಿ ನೋಟಿಸ್ ಅಂಟಿಸಲಾಗುತ್ತಿದೆ. ಪಾಲಿಕೆ ಮತ್ತು ಸಂಚಾರ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಲಿದ್ದಾರೆ.

ನಿಗದಿತ ಅವಧಿಯೊಳಗೆ ಮಾಲೀಕರು ದಂಡ ಪಾವತಿಸಿ ವಾಹನಗಳನ್ನು ತೆಗೆದುಕೊಂಡು ಹೋಗಬಹುದು. ಗಡುವು ಮುಗಿದ ಬಳಿಕ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ. ನಂತರವೂ ವಾಹನಗಳನ್ನು ವಾಪಸ್ ಪಡೆಯಲು ದಂಡ ಹಾಗೂ ಟೋಯಿಂಗ್ ಶುಲ್ಕ ಪಾವತಿಸಬೇಕಾಗುತ್ತದೆ. ಇದಕ್ಕೂ ಸ್ಪಂದಿಸದಿದ್ದರೆ ವಾಹನಗಳ ವಿವರವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ, 15 ದಿನಗಳ ಬಳಿಕ ಸಾರ್ವಜನಿಕ ಹರಾಜು ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಸಾರ್ವಜನಿಕ ಸ್ಥಳಗಳನ್ನು ಮುಕ್ತಗೊಳಿಸಿ ಪಾದಚಾರಿಗಳ ಸುರಕ್ಷತೆಗೆ ಆದ್ಯತೆ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಒಂದು ಸ್ಥಳದಿಂದ ದಂಡ ಪಾವತಿಸಿ ವಾಹನ ತೆಗೆದುಕೊಂಡು ಮತ್ತೊಂದು ಸಾರ್ವಜನಿಕ ಸ್ಥಳದಲ್ಲಿ ಮತ್ತೆ ನಿಲ್ಲಿಸುವವರ ವಿರುದ್ಧ ಹೆಚ್ಚಿನ ದಂಡ ವಿಧಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಇದೇ ವೇಳೆ, ಸಾರ್ವಜನಿಕರು ನಗರದ ಯಾವುದೇ ಭಾಗದಲ್ಲಿ ಅನಧಿಕೃತವಾಗಿ ನಿಲ್ಲಿಸಿರುವ ವಾಹನಗಳು ಕಂಡುಬಂದರೆ ‘ಬಿಟಿಪಿ ಅಸ್ತ್ರಂ’ ಆ್ಯಪ್ ಮೂಲಕ ಮಾಹಿತಿ ನೀಡಬಹುದು. ಪರಿಶೀಲನೆಯ ಬಳಿಕ ಅಂತಹ ವಾಹನಗಳಿಗೂ ನೋಟಿಸ್ ನೀಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

RELATED ARTICLES
- Advertisment -
Google search engine

Most Popular