ಬೆಳಗಾವಿ : ಬೆಳಗಾವಿಯ ಇಂದಿನ ಪರಿಸ್ಥಿತಿಗೆ ಸ್ಥಳೀಯ ರಾಜಕಾರಣಿಗಳೇ ಕಾರಣರಾಗಿದ್ದಾರೆ. ಇಂದು ನಗರದಲ್ಲಿ ಕನ್ನಡ ಉಳಿದಿದ್ದರೆ ಅದಕ್ಕೆ ಕನ್ನಡಪರ ಹೋರಾಟಗಾರರೇ ಕಾರಣ ಎಂದು ಕನ್ನಡಪರ ಚಳುವಳಿ ನಾಯಕ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು, 29ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಒಂದಾಗಿ ಹೋರಾಟ ಆರಂಭಿಸಿರುವುದು ಹೊಸ ಕ್ರಾಂತಿಯ ಆರಂಭವಾಗಿದೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಕನ್ನಡಪರ ಸರ್ಕಾರ ಅಧಿಕಾರಕ್ಕೆ ಬರಬೇಕು. ವಿಧಾನಸೌಧದಲ್ಲಿ ಕನ್ನಡಪರ ಸಂಘಟನೆಗಳಿಗೆ ವಿಶೇಷ ಕೊಠಡಿ ನೀಡಬೇಕು ಹಾಗೂ ವರ್ಷಕ್ಕೆ ಒಂದು ಕೋಟಿ ರೂ. ಅನುದಾನ ಘೋಷಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ಪ್ರೆಸ್ ಕ್ಲಬ್ಗೆ ಐದು ಕೋಟಿ ರೂ. ನೆರವು ನೀಡಬೇಕು ಎಂದ ಅವರು, ಇವೆಲ್ಲ ಸಾಧ್ಯವಾಗಬೇಕಾದರೆ ನಾನು ಮುಖ್ಯಮಂತ್ರಿ ಆಗಬೇಕು. ಮುಂದಿನ ಬಾರಿ ನಾನೇ ಸಿಎಂ ಆಗುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯವನ್ನು ಜೂನ್ 2ರೊಳಗೆ ಅಂಗೀಕರಿಸಬೇಕು ಎಂದು ಆಗ್ರಹಿಸಿದ ವಾಟಾಳ್, ನಿರ್ಣಯ ಕೈಗೊಳ್ಳದಿದ್ದರೆ ಬೆಳಗಾವಿಯಲ್ಲಿ ಕಂಡರಿಯದ ರೀತಿಯ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಜೂನ್ 4ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕನ್ನಡಪರ ಸಂಘಟನೆಗಳ ಮಹತ್ವದ ಸಭೆ ನಡೆಯಲಿದ್ದು, ಮುಂದಿನ ಹೋರಾಟದ ರೂಪುರೇಷೆ ಅಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು. ಸಭೆಯ ಬಳಿಕ ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡುವ ಸಾಧ್ಯತೆಯನ್ನೂ ಅವರು ಸೂಚಿಸಿದರು. ಬೆಳಗಾವಿಯಿಂದಲೇ ರಾಜ್ಯವ್ಯಾಪಿ ಹೋರಾಟ ಆರಂಭವಾಗಲಿದ್ದು, ಕನ್ನಡಪರ ಸಂಘಟನೆಗಳನ್ನು ಒಂದೇ ವೇದಿಕೆಗೆ ತರಲಾಗುವುದು ಎಂದು ಹೇಳಿದರು.
ಬಂದ್ ದಿನ ಬೆಳಗಾವಿಯಲ್ಲಿ ಬೀದಿ ಬೀದಿಯಲ್ಲಿ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಅದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಪಾಲಿಕೆಯ ಸದಸ್ಯರನ್ನು ಮನೆಗೆ ಕಳುಹಿಸುವ ಹೋರಾಟ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಸಿದರು.



