Friday, May 29, 2026
Google search engine

Homeದೇಶಗಜಲ್ ಲೋಕದ ಮಧುರ ಧ್ವನಿ ಮೌನ

ಗಜಲ್ ಲೋಕದ ಮಧುರ ಧ್ವನಿ ಮೌನ

ಭೋಪಾಲ್ : ಉರ್ದು ಸಾಹಿತ್ಯ ಲೋಕದ ಅತ್ಯಂತ ಮೃದು ಹಾಗೂ ಸರಳ ಧ್ವನಿಯೊಂದು ಶಾಶ್ವತವಾಗಿ ಮೌನವಾಗಿದೆ. ತಮ್ಮ ಸರಳ ಶಾಯರಿಗಳ ಮೂಲಕ ಕೋಟ್ಯಂತರ ಹೃದಯಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಖ್ಯಾತ ಶಾಯರ್ ಬಶೀರ್ ಬದ್ರ್ ಅವರು ನಿಧನರಾಗಿದ್ದಾರೆ. ಪದ್ಮಶ್ರೀ ಪುರಸ್ಕೃತ ಬಶೀರ್ ಬದ್ರ್ ಅವರು ಭೋಪಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಅವರ ನಿಧನದೊಂದಿಗೆ, ಸಾಮಾನ್ಯ ಜನರ ಭಾವನೆಗಳನ್ನು ಅತ್ಯಂತ ಸರಳ ಪದಗಳಲ್ಲಿ ಜಗತ್ತಿನ ಎದುರು ಇಡುತ್ತಿದ್ದ ಉರ್ದು ಶಾಯರಿಯ ಒಂದು ಸುಂದರ ಯುಗಾಂತ್ಯವಾಗಿದೆ. 91 ವರ್ಷದ ಬಶೀರ್ ಬದ್ರ್ ಅವರು ದೀರ್ಘಕಾಲದಿಂದ ಡಿಮೆನ್ಷಿಯಾ (ಜ್ಞಾಪಕಶಕ್ತಿ ನಷ್ಟ) ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಅವರ ನೆನಪಿನ ಶಕ್ತಿ ತೀರಾ ದುರ್ಬಲಗೊಂಡಿದ್ದು, ಜನರನ್ನು ಗುರುತಿಸಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಅಯೋಧ್ಯೆಯಿಂದ ಅಲಿಗಢ್‌ವರೆಗೆ…

ಬಶೀರ್ ಬದ್ರ್ ಅವರು 15 ಫೆಬ್ರವರಿ 1935 ರಂದು ಅಯೋಧ್ಯೆಯಲ್ಲಿ ಜನಿಸಿದರು. ಅವರ ಮೂಲ ಹೆಸರು ಸೈಯದ್ ಮೊಹಮ್ಮದ್ ಬಶೀರ್. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರೈಸಿದ ಅವರು, ನಂತರ ಮೀರತ್ ಕಾಲೇಜಿನಲ್ಲಿ ಉರ್ದು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬೋಧನೆಯ ಜೊತೆಜೊತೆಗೇ ಅವರ ಶಾಯರಿಗಳೂ ಜನರ ಹೃದಯವನ್ನು ತಲುಪಲು ಪ್ರಾರಂಭಿಸಿದವು. 1970 ಮತ್ತು 80ರ ದಶಕದಲ್ಲಿ ಅವರ ಗಜಲ್‌ಗಳು ದೇಶ-ವಿದೇಶಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದವು.

ಉರ್ದು ಶಾಯರಿಯನ್ನು ಜನಸಾಮಾನ್ಯರ ಭಾಷೆಯಾಗಿಸಿದ ಕೀರ್ತಿ

ಬದ್ರ್ ಅವರ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ, ಅವರು ಉರ್ದು ಶಾಯರಿಯನ್ನು ಕಠಿಣ ಪದಗಳ ಹಿಡಿತದಿಂದ ಮುಕ್ತಗೊಳಿಸಿ, ಸಾಮಾನ್ಯ ಆಡುಭಾಷೆಗೆ ತಂದರು. ಅವರ ಗಜಲ್‌ಗಳಲ್ಲಿ ಜೀವನದ ಸತ್ಯ, ಸಂಬಂಧಗಳ ಮೃದುತ್ವ ಮತ್ತು ಗೊಂದಲಗಳು, ಪ್ರೀತಿಯ ರಸ ಹಾಗೂ ಮಾನವೀಯ ಸಂವೇದನೆಗಳು ಎದ್ದುಕಾಣುತ್ತಿದ್ದವು. ಇದೇ ಕಾರಣಕ್ಕೆ ಅವರ ಪ್ರತಿಯೊಂದು ಸಾಲುಗಳೂ ಸಾಮಾನ್ಯ ಜನರ ಬದುಕಿನ ಭಾಗವಾದವು.

ಗೌರವ ಮತ್ತು ಸಂತಾಪ

ಸಾಹಿತ್ಯ ಲೋಕಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ, ಭಾರತ ಸರ್ಕಾರ ಅವರಿಗೆ 1999 ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ ಉರ್ದು ಶಾಯರಿಯನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸಿದ್ದು ಅವರ ಬದುಕಿನ ಅತ್ಯಂತ ದೊಡ್ಡ ಸಾಧನೆಯಾಗಿದೆ.

ಅವರ ನಿಧನಕ್ಕೆ ಸಾಹಿತ್ಯ ಮತ್ತು ಕಲಾ ಲೋಕ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಬಶೀರ್ ಬದ್ರ್ ಅವರ ನಿರ್ಗಮನದಿಂದಾಗಿ ಇವತ್ತು “ಉರ್ದು ಸಾಹಿತ್ಯ ಸ್ವಲ್ಪ ಬಡವಾಗಿದೆ” ಎಂದು ಅಭಿಮಾನಿಗಳು ಮತ್ತು ಸಾಹಿತ್ಯಾಸಕ್ತರು ಕಂಬನಿ ಮಿಡಿದಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular