Saturday, June 6, 2026
Google search engine

Homeರಾಜ್ಯಸುದ್ದಿಜಾಲನೈಸರ್ಗಿಕ ಗಾಳಿಯಿಂದ ಆರೋಗ್ಯಕ್ಕೆ ಸಹಕಾರಿ: ಶಾಸಕ ಜಿಟಿಡಿ

ನೈಸರ್ಗಿಕ ಗಾಳಿಯಿಂದ ಆರೋಗ್ಯಕ್ಕೆ ಸಹಕಾರಿ: ಶಾಸಕ ಜಿಟಿಡಿ

ಮೈಸೂರು: ಪರಿಸರ ಉಳಿಸಿದರೆ ನೈಸರ್ಗಿಕ ಗಾಳಿಯಿಂದ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ನಾವು ಮರ-ಗಿಡಗಳನ್ನು ನಾಶ ಮಾಡದೆ ಪ್ರಕೃತಿ ಉಳಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಾವು ಏನಾದರೂ ಕೊಡುಗೆ ನೀಡುವಂತಹ ಕೆಲಸ ಮಾಡಿದರೆ ಉತ್ತಮವಾಗಲಿದೆ. ಖಾಲಿ ಜಾಗದಲ್ಲಿ ಒಂದು ಸಸಿ ನೆಟ್ಟರೆ ಒಂದು ಜೀವಕ್ಕೆ ಗಾಳಿ ದೊರೆಯಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಮೈಸೂರು ಮಹಾನಗರಪಾಲಿಕೆ ಹಾಗೂ ಅರಣ್ಯ ಇಲಾಖೆವತಿಯಿಂದ ರಾಮಕೃಷ್ಣನಗರ ಎಚ್.ಬ್ಲಾಕ್‌ನ ಆರೋಗ್ಯ ಬಡಾವಣೆ ಉದ್ಯಾನವನದಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬದಲಾದ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದರೂ ನಮ್ಮಲ್ಲಿನ ನೈಸರ್ಗಿಕ ಸಂಪತ್ತು,ಕಾಡು, ಗಿಡಗಳನ್ನು ಉಳಿಸಿಕೊಳ್ಳಬೇಕು. ಮರಗಳನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಹಾರಾಜರ ಕಾಲದಿಂದ ಉಳಿಸಿಕೊಂಡು ಬಂದಿರುವ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಳ್ಳಬೇಕು. ನಗರಪಾಲಿಕೆಯ ಹಲವಾರು ಉದ್ಯಾನವನಗಳಲ್ಲಿ ಗಿಡಗಳನ್ನು ನೆಟ್ಟು ಸುಂದರವನವನ್ನಾಗಿ ಮಾಡುವುದು ಎಲ್ಲರ ಕರ್ತವ್ಯ. ನಗರಪಾಲಿಕೆ ವತಿಯಂದ 15ಸಾವಿರ ಗಿಡಗಳನ್ನು ಏಕಕಾಲದಲ್ಲಿ ನೆಡುವ ತೀರ್ಮಾನ ಮಾಡಿ ಸಿಬ್ಬಂದಿ, ಪೌರ ಕಾರ್ಮಿಕರಿಗೆ ನೆಡುವುದಕ್ಕೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿರುವುದನ್ನು ಎಲ್ಲರೂ ಪಾಲಿಸಬೇಕು ಎಂದರು.

ಒಬ್ಬೊಬ್ಬರು ಒಂದೊಂದು ಗಿಡವನ್ನು ನೋಡಿಕೊಂಡರೆ ದೊಡ್ಡದಾಗಿ ಬೆಳೆಯಬೇಕು.ಸ್ಥಳೀಯ ಜನರು ವಾಯುವಿಹಾರ ಮಾಡುವ ಜತೆಗೆ ಗಿಡಗಳನ್ನು ದತ್ತು ಪಡೆದು ಪೋಷಣೆಮಾಡಬೇಕು ಎಂದರು. ಕಂದಾಯ ಇಲಾಖೆಯಲ್ಲಿ ಕಡತಗಳು ಉಳಿದು ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುವ ಮಾತು ಒಂದು ಕಾಲದಲ್ಲಿ ಕೇಳಿ ಬರುತ್ತಿತ್ತು. ಆದರೆ, ಈಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಡತ ಉಳಿಯಲ್ಲ. ಕಂದಾಯ ಇಲಾಖೆಯಲ್ಲಿ ಜನರ ಅರ್ಜಿಗಳು ಉಳಿಯಲ್ಲ. ಕಂದಾಯ ಸೇರಿ ಯಾವುದೇ ವ್ಯಾಜ್ಯಗಳ ಅರ್ಜಿಗಳು ಬಾಕಿ ಉಳಿಯದೆ ಇತ್ಯರ್ಥಪಡಿಸುವಂತೆ ಮಾಡಿರುವುದು ವಿಶೇಷವಾಗಿದೆ. ಜಿಲ್ಲಾಧಿಕಾರಿಗೆ ಪರಿಸರದ ಬಗ್ಗೆ ಕಾಳಜಿ ಇದೆ. ಕಾಲು ನೋವಿನ ಸಮಸ್ಯೆ ಇರುವ ಕಾರಣ 45 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರೂ ಅದನ್ನು ಬದಿಗೊತ್ತಿ ಕಚೇರಿಗೆ ಆಗಮಿಸಿ ಕಾರ್ಯ ಮಾಡುತ್ತಿದ್ದಾರೆ. ಅದೇ ರೀತಿ ಪರಿಸರ ದಿನಾಚರಣೆ ಸಮಾರಂಭದಲ್ಲಿ ಭಾಗಿಯಾಗಬೇಕೆಂಬ ಆಸೆ ಹೊತ್ತು ಪಾಲ್ಗೊಂಡಿರುವುದು ಶ್ಲಾಘನೀಯವಾಗಿದೆ ಎಂದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ನಗರಪಾಲಿಕೆ ಆಯುಕ್ತ ಶೇಖರ್ ತನ್ವೀರ್ ಆಸಿಫ್, ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಪರಮೇಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ,ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್ ಮತ್ತಿತರರು ಹಾಜರಿದ್ದರು.

ತ್ರಿಮೂರ್ತಿಗಳಂತೆ ಮೂವರು ಕೆಲಸ
ಜಿಲ್ಲಾಧಿಕಾರಿ,ಜಿಪಂ ಸಿಇಒ,ನಗರಪಾಲಿಕೆ ಆಯುಕ್ತರು ತ್ರಿಮೂರ್ತಿಗಳಂತೆ ಕೆಲಸ ಮಾಡುತ್ತಿದ್ದಾರೆ.ಒಬ್ಬರು ನಗರದ ಅಭಿವೃದ್ಧಿ,ಮತ್ತೊಬ್ಬರು ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಕೆಲಸ ಮಾಡುತ್ತಿರುವುದರಿಂದ ಉತ್ತಮವಾಗಿ ನಡೆಯುತ್ತಿದೆ. ಪಾಲಿಕೆ ಆಯುಕ್ತರಿಗೆ ಡಿಸಿ ಹುದ್ದೆ ದೊರೆತಿರುವುದು ಗೊತ್ತಾಗಿದೆ.ಎಲ್ಲೇ ಹೋದರೂ ಉತ್ತಮವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

-ಜಿ.ಟಿ.ದೇವೇಗೌಡ,ಶಾಸಕ

RELATED ARTICLES
- Advertisment -
Google search engine

Most Popular