ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕಳೆದ ಐದು ತಿಂಗಳಿನಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಸುಸ್ತಿದಾರರಲ್ಲದ ಸಹಕಾರ ಸಂಘಗಳಲ್ಲಿ ಹೊಸ ಸದಸ್ಯರಿಗೂ ಸಾಲ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಹಂಪಾಪುರ, ಚಿಕ್ಕವಡ್ಡರಗುಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ರೈತ ಸದಸ್ಯರಿಗೆ ನೀಡಲಾದ ಟ್ರಾಕ್ಟರ್ ಗಳನ್ನು ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್ ಆವರಣದಲ್ಲಿ ವಿತರಿಸಿ ಮಾತನಾಡಿದ ಅವರು ರೈತರಿಗೆ ಟ್ರಾಕ್ಟರ್ ಜತೆಗೆ ಬೊರ್‌ವೇಲ್ ಕೊರಿಸಲು ಮತ್ತು ಬೈಕ್ ಹಾಗೂ ಕಾರು ಖರೀದಿ ಮಾಡಲು ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಸಹಕಾರ ಸಂಘಗಳಲ್ಲಿ ಪಡೆದಂತಹ ಸಾಲವನ್ನು ರೈತ ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಶೂನ್ಯ ಬಡ್ಡಿದರದ ಬೆಳೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬೇಕು ಇದರ ಜತೆಗೆ ಬೋರ್‌ವೇಲ್, ಟ್ರಾಕ್ಟರ್ ಸೇರಿದಂತೆ ಇತರ ವಾಹನಗಳ ಖರೀದಿಗೆ ಶೇಕಡ ೩ರ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು ಈ ಸೌಲಭ್ಯವನ್ನು ರೈತಬಾಂಧವರು ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನಲ್ಲಿರುವ ೨೪ ಸಹಕಾರ ಸಂಘಗಳ ಪೈಕಿ ಕೆಲವು ಸಂಘಗಳು ಸುಸ್ತಿಯಾಗಿದ್ದು ೩ಕೋಟಿ ರೂ. ಬಾಕಿ ಇದ್ದು, ಸುಸ್ತಿದಾರರಾಗಿರುವ ರೈತರಿಗೆ ಶೇ.೧೪ರಷ್ಟು ಬಡ್ಡಿ ಹಾಕಲಾಗುತ್ತದೆ ಈ ಬಗ್ಗೆ ಸಂಘದ ಆಡಳಿತ ಮಂಡಳಿಯವರು ಸುಸ್ತಿದಾರ ರೈತರಿಗೆ ಅರಿವು ಮೂಡಿಸಿ ಸಾಲ ಮರುಪಾವತಿ ಮಾಡಿಸಲು ಪ್ರಯತ್ನ ಮಾಡಬೇಕೆಂದು ಸೂಚಿಸಿದರು.
ಎಂಸಿಡಿಸಿಸಿ ಬ್ಯಾಂಕ್ ವತಿಯಿಂದ ವಿವಿಧ ಯೋಜನೆಯಡಿಯಲ್ಲಿ ೨೦೫೦ ಕೋಟಿ.ರೂ.ಗಳ ಸಾಲ ವಿತರಿಸಲಾಗಿದ್ದು, ವಾರ್ಷಿಕ ೪ ಕೋಟಿ ರೂ.ಗಳ ಆರ್ಥಿಕ ವ್ಯವಹಾರ ಮಾಡುತ್ತಿದೆ, ಇದನ್ನು ರೈತಬಾಂಧವರು ಅರ್ಥಮಾಡಿಕೊಂಡು ಠೇವಣಿಯನ್ನು ನಮ್ಮ ಬ್ಯಾಂಕಿನಲ್ಲಿಯೇ ಇರಿಸಬೇಕು ಎಂದು ಕೋರಿದ್ದ ಅಧ್ಯಕ್ಷ ದೊಡ್ಡಸ್ವಾಮೇಗೌಡ ನಾವು ಇತರ ಬ್ಯಾಂಕುಗಳಿಗಿಂತ ಹೆಚ್ಚು ಬಡ್ಡಿ ನೀಡುತ್ತೇವೆ ಎಂದು ಮಾಹಿತಿ ನೀಡಿದರು.
ಮಹಿಳಾ ಸ್ವ-ಸಹಾಯ ಸಂಘಗಳಿಗೆ ೧೦ ರಿಂದ ೧೫ ಲಕ್ಷ ರೂ.ಗಳ ಸಾಲ ನೀಡುತ್ತಿದ್ದೇವೆ ಆದರೆ ಸಂಘದ ಸದಸ್ಯರುಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಮರುಪಾವತಿ ಮಾಡುವಂತೆ ಸಹಕಾರ ಸಂಘಕ್ಕೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅಧ್ಯಕ್ಷರು ಮಹಿಳೆಯರು ಸಹಕಾರ ಸಂಘದ ವತಿಯಿಂದ ನೀಡುವ ಸಾಲದ ಬಡ್ಡಿದರ ಕಡಿಮೆ ಇದೆ ಎಂಬುವುದನ್ನು ಅರಿಯಬೇಕೆಂದು ಕಿವಿ ಮಾತು ಹೇಳಿದರು.
ಎಂಸಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಸ್.ಸಿದ್ದೇಗೌಡ, ಹಂಪಾಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಹೆಚ್.ಪಿ.ಪ್ರಶಾಂತ್, ಹೆಬ್ಬಾಳು ಅಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಹೊಸಗ್ರಹಾರ ಅಧ್ಯಕ್ಷ ರಾಜೇಗೌಡ, ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಚಿಕ್ಕವಡ್ಡರಗುಡಿ ಅಧ್ಯಕ್ಷ ನಾರಾಯಣ್, ಮಾಜಿ ಅಧ್ಯಕ್ಷ ಜಿ.ಆರ್.ಕೃಷ್ಣೇಗೌಡ, ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ರಾಜ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿಗಳಾದ ಮೂಡಲಕೊಪ್ಪಲು.ಎನ್.ದಿನೇಶ್, ಬಸವರಾಜು, ಟಿ.ಉಮೇಶ್, ವಿಎಸ್‌ಎಸ್‌ಎನ್ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಬಿ.ಹೆಚ್.ಮಹದೇವ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್ ಮತ್ತೀತರು ಹಾಜರಿದ್ದರು.



