Monday, June 8, 2026
Google search engine

Homeಕ್ರೀಡೆನಿವೃತ್ತಿಯ ಪ್ರಶ್ನೆಗೆ ಗರಂ ಆದ ಹರ್ಮನ್‌ಪ್ರೀತ್ ಕೌರ್; ವೀಡಿಯೋ ವೈರಲ್!

ನಿವೃತ್ತಿಯ ಪ್ರಶ್ನೆಗೆ ಗರಂ ಆದ ಹರ್ಮನ್‌ಪ್ರೀತ್ ಕೌರ್; ವೀಡಿಯೋ ವೈರಲ್!

ನವದೆಹಲಿ : ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ಆರಂಭಕ್ಕೂ ಮುನ್ನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸುದ್ದಿಗೋಷ್ಠಿಯೊಂದರಲ್ಲಿ ವರದಿಗಾರರೊಬ್ಬರು ಕೇಳಿದ ನಿವೃತ್ತಿಯ ಪ್ರಶ್ನೆಗೆ ಅವರು ನೀಡಿದ ಖಡಕ್ ಉತ್ತರ ಈಗ ಎಲ್ಲೆಡೆ ವೈರಲ್ ಆಗಿದೆ.

ಮಹಿಳಾ ಟಿ20 ವಿಶ್ವಕಪ್ 2026 ಜೂನ್ 12 ರಿಂದ ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಗಲಿದೆ. ಟೂರ್ನಿಗೂ ಮುನ್ನ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಎಲ್ಲಾ ತಂಡಗಳ ನಾಯಕಿಯರು ಭಾಗವಹಿಸಿದ್ದರು. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯ ವೇಳೆ ವರದಿಗಾರರೊಬ್ಬರು ಹರ್ಮನ್‌ಪ್ರೀತ್ ಅವರ ಭವಿಷ್ಯದ ಬಗ್ಗೆ ಪ್ರಶ್ನಿಸುತ್ತಾ, “ಇದು ನಿಮ್ಮ ಕೊನೆಯ ವಿಶ್ವಕಪ್ ಆಗಲಿದೆಯೇ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದರು.

ಈ ಪ್ರಶ್ನೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಹರ್ಮನ್‌ಪ್ರೀತ್, “ಇದು ನನ್ನ ಕೊನೆಯ ವಿಶ್ವಕಪ್ ಏಕೆ ಆಗಬೇಕು? ನಾನು ನಿವೃತ್ತಿಯಾಗಲಿ ಎಂದು ನೀವು ಬಯಸುತ್ತೀರಾ?” ಎಂದು ಮರುಪ್ರಶ್ನೆ ಹಾಕಿದರು. ಹರ್ಮನ್‌ಪ್ರೀತ್ ಅವರ ಈ ನೇರ ಉತ್ತರವನ್ನ ನಿರೀಕ್ಷಿಸದ ವರದಿಗಾರ ಸ್ವಲ್ಪ ಮುಜುಗರಕ್ಕೊಳಗಾಗಿ, “ಇಲ್ಲ, ನಾನು ಸುಮ್ಮನೆ ತಿಳಿದುಕೊಳ್ಳಲು ಬಯಸಿದ್ದೆ. ಇದು ನಿಮ್ಮ ಕೊನೆಯ ವಿಶ್ವಕಪ್ ಅಲ್ಲ ಎಂದು ಕೇಳಿ ಸಂತೋಷವಾಯಿತು,” ಎಂದರು. ಇದಕ್ಕೆ ಹರ್ಮನ್‌ಪ್ರೀತ್ ನಗುತ್ತಲೇ, “ಹಾಗಿದ್ದಮೇಲೆ ನೀವು ಅಂತಹ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ?” ಎಂದು ತಿರುಗೇಟು ನೀಡಿದರು.

ಪಾಕಿಸ್ತಾನದ ವಿರುದ್ಧ ಭಾರತದ ಮೊದಲ ಪಂದ್ಯ

ಮಹಿಳಾ ಟಿ20 ವಿಶ್ವಕಪ್ 2026ರ ಉದ್ಘಾಟನಾ ಪಂದ್ಯವು ಜೂನ್ 12 ರಂದು ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಭಾರತ ತಂಡವು ತನ್ನ ಅಭಿಯಾನವನ್ನು ಜೂನ್ 14 ರಂದು ಪಾಕಿಸ್ತಾನದ ವಿರುದ್ಧ ಆರಂಭಿಸಲಿದೆ.

ಭಾರತದ ಪಂದ್ಯಗಳ ವೇಳಾಪಟ್ಟಿ:

ಜೂನ್ 14: ಭಾರತ vs ಪಾಕಿಸ್ತಾನ

ಜೂನ್ 17: ಭಾರತ vs ನೆದರ್ಲ್ಯಾಂಡ್ಸ್

ಜೂನ್ 21: ಭಾರತ vs ದಕ್ಷಿಣ ಆಫ್ರಿಕಾ

ಜೂನ್ 25: ಭಾರತ vs ಬಾಂಗ್ಲಾದೇಶ

ಜೂನ್ 28: ಭಾರತ vs ಆಸ್ಟ್ರೇಲಿಯಾ (ಗುಂಪು ಹಂತದ ಕೊನೆಯ ಪಂದ್ಯ)

ಈ ಬಾರಿಯ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿದ್ದು, ಅವುಗಳನ್ನು ತಲಾ ಆರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular