ಬೆಂಗಳೂರು : ಬಹುನಿರೀಕ್ಷಿತ ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮರುಸ್ಪರ್ಧೆಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದು ಬಿಜೆಪಿ- ಜೆಡಿಎಸ್ ಮೈತ್ರಿಕೂಟದಲ್ಲಿ ಬಿರುಕು ಮೂಡಿವ ಸಾಧ್ಯತೆ ಇದೆ. ಜೊತೆಗೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಸಂಘಟಿಸಲು ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಟಿಕೆಟ್ ನೀಡದಿರುವುದು ಬರುವ ದಿನಗಳಲ್ಲಿ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಲಿದೆ ಎಂಬ ಮಾತು ಕೇಳಿಬರುತ್ತದೆ.
ಅದರಲ್ಲೂ ಜೆಡಿಎಸ್ ವರೀಷ್ಠ ದೇವೇಗೌಡ ಅವರಿಗೆ ಟಿಕೆಟ್ ಕೊಡದಿರುವುದು ಬಿಜೆಪಿ ಜೆಡಿಎಸ್ ಮೈತ್ರಿಕೂಟದಲ್ಲಿ ಯಾವುದು ಸರಿ ಇಲ್ಲ ಎಂಬುದು ಮತ್ತೊಮೆ ಜಗಜ್ಜಾಹೀರವಾಗಿದೆ. ಗೌಡರಿಗೆ ಟಿಕೆಟ್ ಕೈತಪ್ಪಿದ್ದರೂ, ಕಡೆ ಪಕ್ಷ ಬಿಜೆಪಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡಿದ್ದರೆ, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗೆ ಶಕ್ತಿ ತುಂಬುತ್ತಿತ್ತು ಎನ್ನುವುದು ಬಹುತೇಕ ಕಾರ್ಯಕರ್ತರ ಅಭಿಲಾಷೆಯಾಗಿತ್ತು.
ಹೀಗಾಗಿ ಈ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ಅವರು, ಸ್ಪರ್ಧೆ ಮಾಡಲಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಅವರನ್ನು ರಾಜ್ಯಸಭೆಗೆ ಕಳುಹಿಸಿದರೆ ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ , ಹಾಸನ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಮತ್ತಿತರ ಭಾಗಗಳಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಕಾರ್ಯಕರ್ತರು ನಂಬಿದ್ದರು.
ಕೊನೆ ಕ್ಷಣದಲ್ಲಿ ಕೇಂದ್ರ ಬಿಜೆಪಿ ವರೀಷ್ಠರು ಆರ್ ಎಸ್ ಎಸ್ ನಲ್ಲಿ ಗುರುತಿಸಿಕೊಂಡಿದ್ದ ಪ್ರೆ.ನಾಗರಾಜ್ ಅವರಿಗೆ ಮಣೆ ಹಾಕಿರುವುದು ಸ್ವತಃ ಕಾರ್ಯಕರ್ತರಲ್ಲಿ ಹೈಕಮಾಂಡ್ ಲೆಕ್ಕಾಚಾರದ ಬಗ್ಗೆ ಅಸಮಾಧಾನ ಮೂಡಿದೆ.ಈ ಬಾರಿ ದೇವೇಗೌಡರಿಗೆ ಅಸ್ಸಾಂ ಇಲ್ಲವೇ ಮಹಾರಾಷ್ಟ್ರದಿಂದ ಸ್ಪರ್ಧೆ ಮಾಡುವಂತೆ ದೆಹಲಿ ನಾಯಕರು ಮನವಿ ಮಾಡಿಕೊಂಡಿದ್ದರು. ಆದರೆ, ಇದನ್ನು ಅಷ್ಟೇ ನಯವಾಗಿ ತಿರಸ್ಕರಿಸಿದ ದೊಡ್ಡ ಗೌಡರು ನನಗೆ ಕೊಡುವುದಿದ್ದರೆ ಕರ್ನಾಟಕದಿಂದ ಟಿಕೆಟ್ ಕೊಡಿ. ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿರುವ ನಾನು ಮಹಾರಾಷ್ಟ್ರ ಇಲ್ಲವೇ ಅಸ್ಸಾಂನಿಂದ ಸ್ಪರ್ಧೆ ಮಾಡಲಾರೆ. ಒಂದುವೇಳೆ ಅಲ್ಲಿಂದ ಸ್ಪರ್ಧಿಸಿದರೆ,ಕಾರ್ಯಕರ್ತರಿಗೆ ಬೇರೆಯದೇ ಆದ ಸಂದೇಶ ಹೋಗುತ್ತದೆ. ಅದರ ಬದಲು ಟಿಕೆಟ್ ನೀಡದಿದ್ದರೂ ನನಗೆ ಬೇಸರವಿಲ್ಲ ಎಂದು ಖುದ್ದು ದೆಹಲಿ ನಾಯಕರ ಬಳಿ ಹೇಳಿಕೊಂಡಿದ್ದರಂತೆ.
ಭಾನುವಾರ ರಾತ್ರಿಯವರೆಗೂ ದೇವೇಗೌಡರು ಬಿಜೆಪಿ -ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಸೋಮವಾರ ಗೌಡರು ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಗುಸು-ಗುಸು ಹಬ್ಬಿತ್ತು. ಯಾವಾಗಲೂ ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಎದುರಾಳಿಗಳಿಗೆ ಶಾಕ್ ಕೊಡುವ ಬಿಜೆಪಿ ಈ ಬಾರಿಯೂ ಅದೇ ತಂತ್ರವನ್ನೇ ಅನುಸರಿಸಿದೆ. ದೇವೇಗೌಡರಿಗೆ ಟಿಕೆಟ್ ನಿರಾಕರಣೆ ಮಾಡಿರುವುದು ಭವಿಷ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟಕ್ಕೆ ಸಂಕಷ್ಟದ ದಿನಗಳು ಎದುರಾಗಬಹುದು ಎನ್ನಲಾಗುತ್ತದೆ.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಆಂತರಿಕವಾಗಿ ಅಸಮಾಧಾನಗಳು ಇದ್ದೇ ಇದೆ. ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿ ನಾಯಕರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ, ಬದಲಾಗಿ ರಾಷ್ಟ್ರ ನಾಯಕರ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಅಭಿಪ್ರಾಯ ಇದೆ. ಜೆಡಿಎಸ್ ಪ್ರಮುಖರ ಈ ನಡೆಯ ಬಗ್ಗೆ ರಾಜ್ಯದಲ್ಲಿ ಒಂದಿಷ್ಟು ಕಮಲ ನಾಯಕರಿಗೆ ಅಸಮಾಧಾನ ಇದ್ದೇ ಇದೆ. ಕರ್ನಾಟಕ ಬಿಜೆಪಿ ಮಾಡುವ ಶಿಫಾರಸುಗಳನ್ನು ಬಿಜೆಪಿ ಹೈಕಮಾಂಡ್ ನಾಯಕತ್ವ ಒಪ್ಪದೆ ಇರುವ ಹಲವು ನಿದರ್ಶನಗಳು ನಡೆದಿವೆ. ಆದರೆ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಬಿಜೆಪಿ ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ.
ಸದ್ಯ ರಾಜ್ಯದ ರಾಜಕೀಯ ಚಿತ್ರಣ ಕೂಡಾ ಬದಲಾವಣೆ ಆಗಿದೆ. ಈ ನಿಟ್ಟಿನಲ್ಲಿ ಹೊಸ ತಂತ್ರಗಾರಿಕೆಯನ್ನು ಬಿಜೆಪಿ ಮತ್ತು ಜೆಡಿಎಸ್ ಅಳವಡಿಸಿಕೊಳ್ಳಬೇಕಾಗಿದೆ. ಈ ನಡುವೆ ರಾಜ್ಯಸಭೆ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರ ಮತ್ತು ದೇವೇಗೌಡರಿಗೆ ಸಿಗದ ಅವಕಾಶ ಜೆಡಿಎಸ್ ನಲ್ಲಿ ಚರ್ಚೆಯನ್ನು ಹುಟ್ಟು ಹಾಕಲಿದೆ. ಇದು ಮೈತ್ರಿ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಕೂಡಾ ಅಷ್ಟೇ ಕುತೂಹಲಕ್ಕೆ ಕಾರಣವಾಗಿದೆ.



