ಮೈಸೂರು : ಮಾದಕ ವಸ್ತುಗಳು ಹಾಗೂ ಡ್ರಗ್ಸ್ ಬಳಕೆ ಹಾಗೂ ಮಾರಾಟ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವ ಮೂಲಕ ಮಾರಾಟ ಹಾಗೂ ಬಳಕೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಕರ್ನಾಟಕ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀನಿವಾಸ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ವಿಧಾನ ಮಂಡಲ ಅಧೀನ ಶಾಸನ ರಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಹಾರ ಪದಾರ್ಥಗಳಲ್ಲಿ, ಪಾಸ್ಟ್ ಪುಡ್ ಮಾರಾಟಗಾರರು ಕೃತಕ ಬಣ್ಣಗಳ ಬಳಕೆ ಮಾಡದಂತೆ ಪುಡ್ ಸೆಪ್ಟಿ ಅಧಿಕಾರಿಗಳು ಗಮನ ಹರಿಸಬೇಕು. ಆಗಾಗ್ಗೆ ಸ್ಟ್ರೀಟ್ ಪುಡ್ ಮಾರಾಟಗಾರರ ಕ್ಯಾಂಟಿನ್ ಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ದಂಡ ವಿಧಿಸಿ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಹಣ್ಣು ತರಕಾರಿ ಮಾರಲು ಹಳ್ಳಿಗಳಿಂದ ಬರುವ ರೈತರಿಗೆ ಮಹಾನಗರ ಪಾಲಿಕೆ ವತಿಯಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ರಸ್ತೆ ಬದಿ ವ್ಯಾಪಾರಿಗಳಿಂದ ಪಾದಚಾರಿಗಳಿಗೆ ತೊಂದರೆ ಆಗಬಾರದು. ಚಿಕನ್ ಹಾಗೂ ಮಟನ್ ಶಾಪ್ ಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಸೂಚನೆ ನೀಡಿದರು.
ಸಮಿತಿಯ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶರವಣ್ ಮಾತನಾಡಿ ಬೀದಿ ಬದಿಯ ಪಾಸ್ಟ್ ಪುಡ್ ಅವರಿಗೆ ಮಹಾನಗರ ಪಾಲಿಕೆಯ ವತಿಯಿಂದ ಪರವಾನಗಿ ನೀಡುವಾಗ ಸ್ವಚ್ಛತೆ ಕಾಪಾಡುವಂತೆ, ಗುಣಮಟ್ಟದ ಆಹಾರ ನೀಡುವಂತೆ ಹಲವು ನಿಬಂಧನೆಗಳನ್ನು ವಿಧಿಸಬೇಕು ಎಂದು ಸೂಚನೆ ನೀಡಿದರು.
ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಮಾಡುವವರ ಮೇಲೆ ಪ್ರಕರಣ ದಾಖಲಿಸಿ ಅವರಿಗೆ ಶಿಕ್ಷೆ ಆಗುವ ಹಾಗೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಸಮಿತಿಯ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ ಶಿವಕುಮಾರ್ ಮಾತನಾಡಿ ಮೈಸೂರು ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ರಸ್ತೆ ಬದಿಗಳಲ್ಲಿ ದೊಡ್ಡ ದೊಡ್ಡ ಮೊಬೈಲ್ ಕ್ಯಾಂಟಿನ್ ಗಳನ್ನು ತೆರೆದಿರುತ್ತಾರೆ. ಇಂತಹ ಕ್ಯಾಂಟಿನ್ ಗಲ್ಲಿಯೇ ಗಾಂಜಾ ಮಾದಕ ವಸ್ತುಗಳ ಮಾರಾಟ ನಡೆಯುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು. ಮೈಸೂರಿನಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಹೊರ ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ರೈಡ್ ಮಾಡಿದ್ದಾರೆ. ಮೈಸೂರಿನಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ರಿಂಗ್ ರೋಡ್ ಸುತ್ತಾ ಮುತ್ತಾ ಹೆಚ್ಚಿನ ಕ್ಲಬ್ ಗಳು ಇದ್ದು ರಿಂಗ್ ರೋಡ್ ನಲ್ಲಿ ಡ್ರಂಕ್ ಆಂಡ್ ಡ್ರೈವ್ ಚೆಕ್ ಮಾಡಬೇಕು. ಪೊಲೀಸ್ ಇಲಾಖೆಯ ಈ ಬಗ್ಗೆ ಹೆಚ್ಚಿನ ಕ್ರಮ ವಹಿಸಬೇಕು ಎಂದರು.

ಮೈಸೂರು ಜಿಲ್ಲೆಯಲ್ಲಿ ಹಲವಾರು ಮೊಬೈಲ್ ಕ್ಯಾಂಟಿನ್ ಗಳು ಇವೆ. ಇಲ್ಲಿ ಪ್ರತಿದಿನ ಸಹಸ್ರಾರು ಜನ ಆಹಾರ ಸೇವನೆ ಮಾಡುತ್ತಾರೆ. ಇವರ ಆರೋಗ್ಯದ ಬಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಗಮನ ಹರಿಸಿ ಆಹಾರದ ಗುಣಮಟ್ಟ ಕಾಪಾಡುವಂತೆ ನೋಡಿಕೊಳ್ಳಬೇಕು. ಮೈಸೂರು ನಗರವು ವೇಗವಾಗಿ ಬೆಳೆಯುತ್ತಿದ್ದು, ಹಲವು ಕಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ದೊಡ್ಡ ಕೆರೆ ಮೈದಾನ ಹಾಗೂ ಕೆ ಆರ್ ಮಾರ್ಕೆಟ್ ನಲ್ಲಿ ಮಾರಾಟಗಾರರಿಗೆ ಕನಿಷ್ಠ ಶೌಚಾಲಯ ಹಾಗೂ ಮಳೆ ಬಂದರೆ ನಿಲ್ಲಲು ಶೆಲ್ಟರ್ ನಿರ್ಮಾಣ ಮಾಡಿ ಕೊಡಬೇಕು. ಕುಡಿಯುವ ನೀರಿನ ಶುದ್ಧ ಘಟಕಗಳನ್ನು ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಸಮಿತಿಯ ಸದಸ್ಯರು ವಿಧಾನ ಮಂಡಲದ ಸದಸ್ಯರಾದ ಹಾಗೂ ಕೋನರೆಡ್ಡಿ, ಅವರು ಮಾತನಾಡಿ ದೇಶದಲ್ಲೇ ಸ್ವಚ್ಛ ನಗರಿ ಎಂಬ ಬಿರುದು ಪಡೆದಿದ್ದು ಮೈಸೂರಿನ ಹೆಗ್ಗಳಿಕೆ. ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ಇಂತಹ ಹೆಮ್ಮೆಯ ಗರಿ ಬರುತ್ತವೆ. ಮಾದಕ ವಸ್ತುಗಳ ಬಳಕೆ ತಪ್ಪಿಸಲು ಸಾರ್ವಜನಿಕರು ಸಹಕಾರ ಅತ್ಯಗತ್ಯ. ಪೋಷಕರು ತಮ್ಮ ಮಕ್ಕಳಲ್ಲಿ ಮಾದಕ ವಸ್ತುಗಳನ್ನು ಬಳಕೆ ಮಾಡದಂತೆ ಅರಿವು ಮೂಡಿಸಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಪರವಾನಗಿ ನೀಡುವಾಗ ಮಾನದಂಡಗಳನ್ನು ಪರಿಶೀಲನೆ ಮಾಡಬೇಕು.
ವಿಧಾನ ಮಂಡಲದ ಸದಸ್ಯರು ಹಾಗೂ ಸಮಿತಿಯ ಸದಸ್ಯರಾದ ಶರಣು ಸಲಗರ ಮಾತನಾಡಿ ಮೈಸೂರು ನಗರಿ ವಿಧ್ಯಾಭ್ಯಾಸಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಗೆ ಹಲವು ದೇಶ ರಾಜ್ಯ ಹಾಗೂ ಜಿಲ್ಲೆ ಗಳಿಂದ ವಿದ್ಯಾರ್ಥಿಗಳು ವಿಧ್ಯಾಭ್ಯಾಸಕ್ಕೆ ಬರುತ್ತಾರೆ. ಇವರಿಗೆ ಮಾದಕ ವಸ್ತುಗಳು ಡ್ರಗ್ಸ್ ಗಳು ಸಿಗದಂತೆ ನೋಡಿಕೊಳ್ಳಬೇಕು. ಮೈಸೂರಿನ ಹಲವು ಕಡೆ ಡ್ರಗ್ಸ್ ಸೀಜ್ ಮಾಡಲಾಗಿದೆ. ಆದರೂ ಡ್ರಗ್ ಮಾರಾಟ ಮಾಡುವವರಿಗೆ ಭಯ ಎಂಬುದು ಇಲ್ಲ. ರಾತ್ರೋ ರಾತ್ರಿ ಶ್ರೀಮಂತ ಆಗಬೇಕು ಎನ್ನುವವರು, ನಿರುದ್ಯೋಗ ಸಮಸ್ಯೆ ಇರುವವರು ಡ್ರಗ್ಸ್ ಮಾರಾಟಕ್ಕೆ ಇಳಿಯುತ್ತಿದ್ದಾರೆ. ಇಂಥವರಿಗೆ ಕಠಿಣ ಕಾನೂನು ರಚನೆ ಮಾಡಬೇಕು. ಟೀ ಅಂಗಡಿಗಳಲ್ಲಿ ಬಿಸಿ ಬಿಸಿ ಚಹಾ ವನ್ನು ಪ್ಲ್ಯಾಸ್ಟಿಕ್ ಲೋಟದಲ್ಲಿ, ಪಾಸ್ಟ್ ಪುಡ್ ಗಳಲ್ಲಿ ಪ್ಲಾಸ್ಟಿಕ್ ತಟ್ಟೆಗಳಲ್ಲಿ ಆಹಾರ ನೀಡುತ್ತಾರೆ ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ಆಗಬೇಕು. ನಶಾ ಮುಕ್ತ ಜಿಲ್ಲೆ ಆಗಬೇಕು ಎಂದರು.
ಶಾಸಕರು ಹಾಗೂ ಸಮಿತಿಯ ಸದಸ್ಯರಾದ ದರ್ಶನ್ ಧ್ರುವ ನಾರಾಯಣ್ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಆಹಾರದ ಗುಣಮಟ್ಟವನ್ನು ಕಾಪಾಡಲು ಅವರಿಗೆ ಅರಿವು ಮೂಡಿಸಬೇಕು. ಬೀದಿ ಬದಿ ವ್ಯಾಪಾರದಿಂದ ಮೈಸೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸಂಬಂಧಿಸಿದ ಏರಿಯಾಗಲ್ಲಿ ಸೂಕ್ತ ಜಾಗವನ್ನು ಹುಡುಕಿ ಸೌಲಭ್ಯಗಳನ್ನು ಕಲ್ಪಿಸಿ ಪುಡ್ ಸ್ಟ್ರೀಟ್ ಗಳನ್ನು ನಿರ್ಮಾಣ ಮಾಡಬೇಕು. ಜೂನ್ ಮಾಹೆಯಲ್ಲಿ 280 ಕೆಜಿ ಯಷ್ಟು ಸುಮಾರು 319 ಕೋಟಿಯಷ್ಟು ಗಾಂಜಾ ಸೀಜ್ ಆಗಿದೆ. ಪೊಲೀಸ್ ಇಲಾಖೆಯಿಂದ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಧಾನ ಸಭೆಯ ಸದಸ್ಯರು ಹಾಗೂ ಸಮಿತಿಯ ಸದಸ್ಯರಾದ ಭೀಮಗೌಡ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಎಸ್ ಯುಕೇಶ್ ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



