ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಮತ್ತು ಅವರ ಪ್ರಾಸ್ಪೆರಿಟಿ ಪಾರ್ಟಿಗೆ ದೇಶದ ಸಂಸದೀಯ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ, “ನನ್ನ ಮಿತ್ರ ಪ್ರಧಾನಿ ಅಬಿ ಅಹ್ಮದ್ ಅಲಿ ಮತ್ತು ಪ್ರಾಸ್ಪೆರಿಟಿ ಪಾರ್ಟಿಗೆ ಇಥಿಯೋಪಿಯಾದ ಸಂಸದೀಯ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಕ್ಕಾಗಿ ಹಾರ್ದಿಕ ಅಭಿನಂದನೆಗಳು” ಎಂದು ಬರೆದಿದ್ದಾರೆ.
“ಭಾರತವು ಇಥಿಯೋಪಿಯಾ ಜೊತೆಗಿನ ತನ್ನ ಐತಿಹಾಸಿಕ, ಬಹುಮುಖಿ ಮತ್ತು ಆಳವಾದ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಕಳೆದ ವರ್ಷ ನಾನು ಇಥಿಯೋಪಿಯಾಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾ, ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಜನರ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ.
ಇಥಿಯೋಪಿಯಾದ ರಾಷ್ಟ್ರೀಯ ಚುನಾವಣಾ ಮಂಡಳಿ (NEBE) ಆಡಳಿತಾರೂಢ ಪ್ರಾಸ್ಪೆರಿಟಿ ಪಾರ್ಟಿ (PP) ದೇಶದ ಏಳನೇ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದೆ ಎಂದು ಘೋಷಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ಈ ಅಭಿನಂದನಾ ಸಂದೇಶ ಬಂದಿದೆ. ಇದರೊಂದಿಗೆ ಪಕ್ಷಕ್ಕೆ ಹೊಸ ಸರ್ಕಾರ ರಚಿಸುವ ಹಾದಿ ಸುಗಮವಾಗಿದೆ.
ಅದಿಸ್ ಅಬಾಬಾದಲ್ಲಿ ಚುನಾವಣೆಯ ಅಧಿಕೃತ ಫಲಿತಾಂಶಗಳನ್ನು ಬಿಡುಗಡೆ ಮಾಡಿದ ಎನ್ ಇಬಿಇ, ಸಾರ್ವತ್ರಿಕ ಚುನಾವಣೆಯಲ್ಲಿ ಹೌಸ್ ಆಫ್ ಪೀಪಲ್ಸ್ ರೆಪ್ರೆಸೆಂಟೇಟಿವ್ಸ್‌ನ 486 ಸ್ಥಾನಗಳ ಪೈಕಿ 438 ಸ್ಥಾನಗಳನ್ನು ಪ್ರಾಸ್ಪೆರಿಟಿ ಪಾರ್ಟಿ ಗೆದ್ದುಕೊಂಡಿದೆ ಎಂದು ತಿಳಿಸಿದೆ. ಇಥಿಯೋಪಿಯಾದ ಸಂವಿಧಾನದ ಪ್ರಕಾರ, ಪ್ರತಿನಿಧಿ ಸಭೆಯಲ್ಲಿ ಯಾವ ರಾಜಕೀಯ ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಹುಮತ ಸಿಗುತ್ತದೆಯೋ, ಅದೇ ಪಕ್ಷವು ಸರ್ಕಾರವನ್ನು ರಚಿಸುತ್ತದೆ ಮತ್ತು ಪ್ರಧಾನ ಮಂತ್ರಿಯನ್ನು ನಾಮನಿರ್ದೇಶನ ಮಾಡುತ್ತದೆ.
ಭಾರತ-ಇಥಿಯೋಪಿಯಾ ಸಂಬಂಧಗಳ ಬಲವರ್ಧನೆ
ಪ್ರಧಾನಿ ಮೋದಿ ಅವರು ಕಳೆದ ಡಿಸೆಂಬರ್‌ನಲ್ಲಿ ಇಥಿಯೋಪಿಯಾಕ್ಕೆ ಭೇಟಿ ನೀಡಿದ್ದರು, ಇದು ಭಾರತ ಮತ್ತು ಇಥಿಯೋಪಿಯಾ ನಡುವಿನ ಸಂಬಂಧಕ್ಕೆ ಹೊಸ ಶಕ್ತಿಯನ್ನು ನೀಡಿತು. ತಮ್ಮ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI), ಗಣಿಗಾರಿಕೆ, ನಿರ್ಣಾಯಕ ಖನಿಜಗಳು, ಸ್ವಚ್ಛ ಇಂಧನ, ಆಹಾರ ಭದ್ರತೆ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದರು.
ಉಭಯ ನಾಯಕರು ವ್ಯಾಪಾರ ಮತ್ತು ಹೂಡಿಕೆ, ಹೊಸ ತಂತ್ರಜ್ಞಾನ, ಶಿಕ್ಷಣ ಮತ್ತು ಸಾಮರ್ಥ್ಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು. ಭಾರತೀಯ ಕಂಪನಿಗಳು ಇಥಿಯೋಪಿಯಾದ ಆರ್ಥಿಕತೆಯಲ್ಲಿ 5 ಬಿಲಿಯನ್ ಡಾಲರ್‌ಗಿಂತ (5 ಶತಕೋಟಿ ಡಾಲರ್) ಹೆಚ್ಚು ಹೂಡಿಕೆ ಮಾಡಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಈ ಹೂಡಿಕೆಯು ಮುಖ್ಯವಾಗಿ ಉತ್ಪಾದನೆ (ಮ್ಯಾನುಫ್ಯಾಕ್ಚರಿಂಗ್) ಮತ್ತು ಫಾರ್ಮಾಸ್ಯುಟಿಕಲ್ಸ್‌ನಂತಹ ಅಗತ್ಯ ಕ್ಷೇತ್ರಗಳಲ್ಲಿ ಆಗಿದ್ದು, ಇದರಿಂದ ಅಲ್ಲಿನ 75,000 ಕ್ಕೂ ಹೆಚ್ಚು ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಸಿಕ್ಕಿದೆ. ಪ್ರಧಾನಿ ಮೋದಿ ಅವರು ಇಥಿಯೋಪಿಯಾ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಗೌರವವನ್ನು ಅವರಿಗೆ ಅವರ ಮೊದಲ ದ್ವಿಪಕ್ಷೀಯ ಭೇಟಿಯ ಸಂದರ್ಭದಲ್ಲಿ ನೀಡಲಾಗಿತ್ತು. (ಏಜೆನ್ಸಿಸ್)



