ನವದೆಹಲಿ : ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಮ್ಮ ಎರಡು ದಿನಗಳ ಮಂಗೋಲಿಯಾ ಪ್ರವಾಸದ ಅವಧಿಯಲ್ಲಿ, ದ್ವಿಪಕ್ಷೀಯ ಸಂಬಂಧಗಳು ಸೇರಿದಂತೆ ಜಾಗತಿಕ ವಿಷಯಗಳ ಕುರಿತು ತಮ್ಮ ಮಂಗೋಲಿಯಾ ಸಹವರ್ತಿ ಬಿ. ಬತ್‌ತ್ಸೆತ್ಸೆಗ್ ಮತ್ತು ಅಧ್ಯಕ್ಷ ಖುರೇಲ್‌ಸುಖ್ ಉಖ್ನಾ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಈ ಪ್ರವಾಸವು ಬತ್‌ತ್ಸೆತ್ಸೆಗ್ ಅವರ ಆಹ್ವಾನದ ಮೇರೆಗೆ ನಡೆದಿತ್ತು.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಂಗಳವಾರ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿ, ಈ ಪ್ರವಾಸದ ಪ್ರಮುಖ ಮುಖ್ಯಾಂಶಗಳ ಮಾಹಿತಿಯನ್ನು ಹಂಚಿಕೊಂಡಿದೆ. ಪ್ರವಾಸದ ಅವಧಿಯಲ್ಲಿ ವಿದೇಶಾಂಗ ಸಚಿವರು ಮಂಗೋಲಿಯಾದ ವಿದೇಶಾಂಗ ಸಚಿವರು ಹಾಗೂ ಕ್ಯಾಬಿನೆಟ್ ಸಚಿವಾಲಯದ ಮುಖ್ಯಸ್ಥ ಬಿ. ಎನ್ಖ್‌ಬಯಾರ್ ಅವರೊಂದಿಗೆ ಸವಿಸ್ತಾರವಾದ ಮಾತುಕತೆ ನಡೆಸಿದರು. ಅವರು ಮಂಗೋಲಿಯಾದ ಅಧ್ಯಕ್ಷ ಖುರೇಲ್‌ಸುಖ್ ಉಖ್ನಾ ಅವರನ್ನು ಸೌಜನ್ಯಯುತವಾಗಿ ಭೇಟಿಯಾದರಲ್ಲದೆ, ಸಂಸತ್ತಿನ ಸ್ಪೀಕರ್ ಎಸ್. ಬ್ಯಾಂಬಾತ್ಸೋಗ್ತ್ ಮತ್ತು ಶಿಕ್ಷಣ ಸಚಿವ ಎಲ್. ಎನ್ಖ್-ಅಮ್ಗಾಲನ್ ಅವರನ್ನೂ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಉಭಯ ದೇಶಗಳು, ಅಕ್ಟೋಬರ್ 2025 ರಲ್ಲಿ ಮಂಗೋಲಿಯಾ ಅಧ್ಯಕ್ಷರು ಭಾರತಕ್ಕೆ ನೀಡಿದ್ದ ಭೇಟಿಯ ನಂತರ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಪ್ರಗತಿಯನ್ನು ಪರಾಮರ್ಶಿಸಿದವು ಮತ್ತು ಭಾರತ-ಮಂಗೋಲಿಯಾ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಿದವು. ಮಾತುಕತೆಯಲ್ಲಿ ಈ ಕೆಳಗಿನ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಒಮ್ಮತ ಮೂಡಿತು.
ಅಭಿವೃದ್ಧಿ ಆಧಾರಿತ ಪಾಲುದಾರಿಕೆ, ವ್ಯಾಪಾರ ಮತ್ತು ಶಿಕ್ಷಣ
ಸಂಸ್ಕೃತಿ, ಸಾಮರ್ಥ್ಯ ವೃದ್ಧಿ ಹಾಗೂ ಪೂರೈಕೆ ಸರಪಳಿ (Supply Chain)
ಗಣಿಗಾರಿಕೆ ಮತ್ತು ನಿರ್ಣಾಯಕ ಖನಿಜಗಳು
ರಕ್ಷಣೆ, ವಾಯು ಸಂಪರ್ಕ ಮತ್ತು ಜನರ ನಡುವಿನ (People-to-People) ಸಂಬಂಧಗಳು
ಇದರೊಂದಿಗೆ, ಇಬ್ಬರೂ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ವಿದ್ಯಮಾನಗಳ ಕುರಿತು ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಂಡರು.
ತೈಲ ಸಂಸ್ಕರಣಾಗಾರ ಯೋಜನೆಗೆ ಭೇಟಿ
ವಿದೇಶಾಂಗ ಸಚಿವರು ಮಂಗೋಲಿಯಾದ ಅಲ್ತಾನ್‌ಶಿರಿ (ಡೊರ್ನೊಗೊವಿ ಪ್ರಾಂತ್ಯ) ನಲ್ಲಿ ಭಾರತದ ನೆರವಿನೊಂದಿಗೆ ನಿರ್ಮಾಣವಾಗುತ್ತಿರುವ ತೈಲ ಸಂಸ್ಕರಣಾಗಾರ (Oil Refinery) ಯೋಜನಾ ಪ್ರದೇಶಕ್ಕೂ ಭೇಟಿ ನೀಡಿ, ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು. ಈ ಭೇಟಿಯ ಸಂದರ್ಭದಲ್ಲಿ ಮಂಗೋಲಿಯಾದ ವಿದೇಶಾಂಗ ಸಚಿವರು ಮತ್ತು ಉದ್ಯಮ ಹಾಗೂ ಖನಿಜ ಸಂಪನ್ಮೂಲ ಸಚಿವ ಗೊಂಗೋರ್ ಡಾಮ್ಡಿನ್ನ್ಯಾಮ್ ಉಪಸ್ಥಿತರಿದ್ದರು.
ಈ ಕುರಿತು ಸಚಿವ ಎಸ್. ಜೈಶಂಕರ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ (X) ನಲ್ಲಿ ” ಸಚಿವರಾದ ಬತ್‌ತ್ಸೆತ್ಸೆಗ್ ಬಟ್ಮಂಖ್ ಮತ್ತು ಉದ್ಯಮ ಹಾಗೂ ಗಣಿಗಾರಿಕೆ ಸಚಿವ ಗೊಂಗೋರ್ ದಮ್ ದಿನ್ನ್ಯಮ್ ಅವರೊಂದಿಗೆ ಮಂಗೋಲ್ ರಿಫೈನರಿ ಯೋಜನೆಯ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದೆ. ಈ ಐತಿಹಾಸಿಕ ‘ಭಾರತ-ಮಂಗೋಲಿಯಾ ಸ್ನೇಹ ಯೋಜನೆ’ಯು ನಿರಂತರವಾಗಿ ಮುನ್ನಡೆಯುತ್ತಿದೆ. ಇದರಲ್ಲಿ ತೊಡಗಿಸಿಕೊಂಡಿರುವ ವಿವಿಧ ತಂಡಗಳೊಂದಿಗೆ ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಸ್ಥಿತಿಗತಿಯನ್ನು ಪರಾಮರ್ಶಿಸಲಾಯಿತು” ಎಂದು ಬರೆದುಕೊಂಡಿದ್ದಾರೆ
ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರವಾಸ
ಅಲ್ಲದೆ ಅವರು ಉಲಾನ್ ಬಾತರ್ ನಲ್ಲಿರುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಅತ್ಯಂತ ಮಹತ್ವದ ಸ್ಥಳವಾದ ‘ಗಂಡನ್‌ತೆಗಚಿನ್ಲೆನ್ ಮಠ’ಕ್ಕೂ (ಗಂಡನ್ ಮಠ) ಭೇಟಿ ನೀಡಿದರು.
“ಉಲಾನ್‌ಬಾತರ್‌ನಲ್ಲಿರುವ ಐತಿಹಾಸಿಕ ಗಂಡನ್ ಮಠಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದೆ. ಈ ಮಠವು ಭಾರತ ಮತ್ತು ಮಂಗೋಲಿಯಾ ನಡುವಿನ ವಿಶೇಷ ಮತ್ತು ಆಧ್ಯಾತ್ಮಿಕ ಸಂಬಂಧದ ಸಂಕೇತವಾಗಿದೆ” ಎಂದು ಉಲ್ಲೇಖಿಸಿದ್ದಾರೆ.
ಭಾರತದ ಸಹಾಯದಿಂದ ಬೌದ್ಧ ಹಸ್ತಪ್ರತಿಗಳ ಡಿಜಿಟಲೀಕರಣ ಕಾರ್ಯ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, “ಭಾರತ-ಮಂಗೋಲಿಯಾ ಪಾಲುದಾರಿಕೆಯ ಅಡಿಯಲ್ಲಿ 1 ದಶಲಕ್ಷ (10 ಲಕ್ಷ) ಬೌದ್ಧ ಹಸ್ತಪ್ರತಿಗಳ ಡಿಜಿಟಲೀಕರಣ ಯೋಜನೆಯ ಕೆಲಸಗಳು ನಡೆಯುತ್ತಿರುವುದನ್ನು ಕಂಡು ಸಂತೋಷವಾಯಿತು. ಈ ಮಠಕ್ಕೆ ಮುಂದೆಯೂ ನಿರಂತರ ಬೆಂಬಲ ನೀಡಲು ಭಾರತ ಬದ್ಧವಾಗಿದೆ” ಎಂದು ಬರೆದುಕೊಂಡಿದ್ದಾರೆ. (ಏಜೆನ್ಸಿಸ್)



