ಶಾಸಕ ಝಮೀರ್ ಅಹ್ಮದ್ ಖಾನ್ ಇವರಿಗೆ ಜನಸೇವೆ ಮತ್ತು ಕಾಂಗ್ರೆಸ್ ಪಕ್ಷದ ನಿಷ್ಠೆಯನ್ನು ಗುರುತಿಸಿ ಪ್ರಮುಖ ಸಚಿವ ಸ್ಥಾನ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕಾಂಗ್ರೆಸ್ ಕಾರ್ಯಕರ್ತ ಅಸೀಬ್ ರಹ್ಮಾನ್ ರಾಜ್ಯದ ನೂತನ ಸಿಎಂ ಡಿಕೆಶಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಇವರು, ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಕಾಂಗ್ರೆಸ್ ಪಕ್ಷದ ಬಲವರ್ಧನೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ತಮಗೆ ನನ್ನ ಗೌರವಪೂರ್ವಕ ನಮಸ್ಕಾರಗಳು. ಈ ಪತ್ರದ ಮೂಲಕ ನಾನು ಚಾಮರಾಜಪೇಟೆ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಜನನಾಯಕರೂ ಆದ ಜಮೀರ್ ಅಹ್ಮದ್ ಖಾನ್ ರವರ ಸೇವೆ, ಸಾಧನೆಗಳು ಮತ್ತು ಪಕ್ಷದ ಬದ್ಧತೆಯನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಜಮೀರ್ ಅಹ್ಮದ್ ರವರು ಕೇವಲ ಒಬ್ಬ ಶಾಸಕರಾಗಿರದೆ, ಕಾಂಗ್ರೆಸ್ ಪಕ್ಷದ ಪ್ರಬಲ ಶಕ್ತಿಯಾಗಿದ್ದಾರೆ. ಪಕ್ಷದ ಸಂಘಟನೆಗೆ ಅವರು ನೀಡಿರುವ ಕೊಡುಗೆ ಅಪಾರ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸಿ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲಿಸುವಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾದದ್ದು. ಪಕ್ಷವು ಕಷ್ಟದ ಪರಿಸ್ಥಿತಿಯಲ್ಲಿದ್ದಾಗಲೂ ಅವರು ಪಕ್ಷದ ಬೆನ್ನೆಲುಬಾಗಿ ನಿಂತು, ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ.
ಅವರ ಜನಪರ ಸಾಧನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿವೆ.
ತಮ್ಮ ಚಾಮರಾಜಪೇಟೆ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಮತ್ತು ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಅವರು ನೀಡಿರುವ ಒತ್ತು ಶ್ಲಾಘನೀಯ ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕದಂತಹ ಕಠಿಣ ಸಮಯದಲ್ಲಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸಾವಿರಾರು ಬಡವರಿಗೆ, ನಿರ್ಗತಿಕರಿಗೆ ಆಹಾರ, ರೇಷನ್ ಮತ್ತು ವೈದ್ಯಕೀಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಎಲ್ಲಾ ಧರ್ಮ ಮತ್ತು ಜಾತಿಯ ಜನರನ್ನು ಸಮಾನವಾಗಿ ಕಾಣುತ್ತಾ, ಕಷ್ಟದಲ್ಲಿರುವ ಯಾವುದೇ ವ್ಯಕ್ತಿ ಮನೆ ಬಾಗಿಲಿಗೆ ಬಂದರೂ ಇಲ್ಲವೆನ್ನದೆ ಸಹಾಯ ಮಾಡುವ ಅವರ ಗುಣ ಅವರನ್ನು ನಿಜವಾದ Mass Leader ಅನ್ನಾಗಿ ಮಾಡಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಮತ್ತು ಭದ್ರವಾಗಿ ನೆಲೆಸುವಲ್ಲಿ ಅವರ ಪರಿಶ್ರಮ, ತ್ಯಾಗ ಮತ್ತು ನಿಷ್ಠೆ ಮರೆಯಲಾಗದಂತಹದ್ದು. ಇಂತಹ ಸಮರ್ಥ, ಜನಪರ ಹಾಗೂ ಕ್ರಿಯಾಶೀಲ ನಾಯಕನಿಗೆ ರಾಜ್ಯ ಸರ್ಕಾರದಲ್ಲಿ ಅತ್ಯಂತ ಪ್ರಮುಖವಾದ ಹಾಗೂ ಉನ್ನತ ಜವಾಬ್ದಾರಿಯುತ ಸಚಿವ ಸ್ಥಾನವನ್ನು ನೀಡಬೇಕೆಂದು ನಾನು ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ಹಾಗೂ ಪಕ್ಷದ ಹಿತೈಷಿಯಾಗಿ ವಿನಂತಿಸುತ್ತೇನೆ.
ಶ್ರೀ ಜಮೀರ್ ಅಹ್ಮದ್ ಖಾನ್ ಅವರಿಗೆ ಉನ್ನತ ಸ್ಥಾನಮಾನ ನೀಡುವುದರಿಂದ ಸರ್ಕಾರಕ್ಕೂ, ಪಕ್ಷಕ್ಕೂ ಮತ್ತು ರಾಜ್ಯದ ಜನತೆಗೂ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ನನ್ನ ದೃಢವಾದ ನಂಬಿಕೆ. ದಯವಿಟ್ಟು ನನ್ನ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿ ತಮ್ಮಲ್ಲಿ ಕೋರುತ್ತೇನೆ.
ತಮ್ಮ ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಈ ಪತ್ರವನ್ನು ಓದಿದ್ದಕ್ಕಾಗಿ ಧನ್ಯವಾದಗಳು ಎಂದು ಕಾಂಗ್ರೆಸ್ ಕಾರ್ಯಕರ್ತ ಅಸೀಬ್ ರಹ್ಮಾನ್ ಪತ್ರದಲ್ಲಿ ಬರೆದಿದ್ದಾರೆ.
ಇನ್ನು ಅಸೀಬ್ ರಹ್ಮಾನ್ ಅವರು ಜಮೀರ್ ಅಹ್ಮದ್ ಖಾನ್ ರವರಿಗೆ ಕೂಡಾ ಪತ್ರ ಬರೆದಿದ್ದು, ಮುಖ್ಯಮಂತ್ರಿಗಳಿಗೆ ನಿಮ್ಮ ಸಚಿವ ಸ್ಥಾನದ ಕುರಿತು ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ವರದಿ: ಶಂಶೀರ್ ಬುಡೋಳಿ



