ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕೇವಲ ಒಕ್ಕಲಿಗ ಸಮುದಾಯದವರಲ್ಲ, ಅವರು ಎಲ್ಲ ಜಾತಿ-ಧರ್ಮಗಳ ಜನರ ನಾಯಕರು. ಅವರ ಆದರ್ಶಗಳನ್ನು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ಮೂಲಕ ಗೌರವಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ₹1.25 ಲಕ್ಷ ಕೋಟಿ ಮೊತ್ತದ ಯೋಜನೆಯನ್ನು ರೂಪಿಸಿರುವುದಾಗಿ ಅವರು ತಿಳಿಸಿದರು.
ಯಲಹಂಕದಲ್ಲಿ ಬೆಂಗಳೂರು ಉತ್ತರ ತಾಲೂಕು ಒಕ್ಕಲಿಗರ ಸಮಿತಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕೆಂಪೇಗೌಡರು ಒಕ್ಕಲಿಗರಾಗಿ ಹುಟ್ಟಿ ವಿಶ್ವಮಾನವರಾಗಿ ಬೆಳೆದವರು. ಅವರ ದೂರದೃಷ್ಟಿಯಿಂದಲೇ ಐದು ಶತಮಾನಗಳ ಹಿಂದೆ ನಿರ್ಮಾಣವಾದ ಬೆಂಗಳೂರು ಇಂದು ಜಗತ್ತಿನ ಗಮನ ಸೆಳೆದ ನಗರವಾಗಿ ಬೆಳೆದಿದೆ ಎಂದು ಹೇಳಿದರು.
“ನಾವು ಯಾರೂ ಬೆಂಗಳೂರನ್ನು ಕಟ್ಟಿದವರಲ್ಲ. ಆದರೆ ಈ ನಗರವನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಹಿರಿಯರು ಹೇಳಿದಂತೆ ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡು ಮುಂದುವರಿಯಬೇಕು. ಕೆಂಪೇಗೌಡರು ಹಾಕಿಕೊಟ್ಟ ಅಡಿಪಾಯವೇ ಇಂದಿನ ಅಭಿವೃದ್ಧಿಗೆ ಕಾರಣವಾಗಿದೆ” ಎಂದು ಹೇಳಿದರು.
ಬೆಂಗಳೂರು ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ವ್ಯಾಪಾರದ ಕೇಂದ್ರವಾಗಿ ಬೆಳೆದಿರುವುದರಿಂದ ದೇಶದ ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ನಗರ ವಿಸ್ತರಣೆ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ‘ವರ್ಟಿಕಲ್ ಡೆವಲಪ್‌ಮೆಂಟ್’ಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ರಾಜ್ಯಕ್ಕೆ ಬೆಂಗಳೂರು ಹೃದಯದಂತಿದ್ದು, ಇಲ್ಲಿ ಎಲ್ಲ ಧರ್ಮ ಮತ್ತು ಸಮುದಾಯದ ಜನರು ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಜಾಗತಿಕ ನಾಯಕರು ಮೊದಲು ದೆಹಲಿ, ಚೆನ್ನೈ ಅಥವಾ ಕೊಲ್ಕತ್ತಾಗೆ ತೆರಳುತ್ತಿದ್ದರು. ಆದರೆ ಈಗ ಬೆಂಗಳೂರಿಗೆ ಬಂದು ನಂತರ ದೆಹಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದನ್ನು ಶಿವಕುಮಾರ್ ನೆನಪಿಸಿಕೊಂಡರು.
ನಗರದ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಇ-ಖಾತೆ ವ್ಯವಸ್ಥೆ ಜಾರಿಗೆ ತರಲಾಗಿದೆ. ಬಿ-ಖಾತೆ ಆಸ್ತಿಗಳನ್ನು ಎ-ಖಾತೆಗೆ ಪರಿವರ್ತಿಸುವ ಮೂಲಕ ಕಷ್ಟಪಟ್ಟು ಆಸ್ತಿ ಸಂಪಾದಿಸಿದವರ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ಉತ್ತರ ತಾಲೂಕು ಒಕ್ಕಲಿಗರ ಸಂಘಕ್ಕೆ ಕೆಎಚ್‌ಬಿಯಿಂದ ನೀಡಿರುವ ನಿವೇಶನದ ದರವನ್ನು ಜನಪ್ರತಿನಿಧಿಗಳ ಮನವಿಯ ಮೇರೆಗೆ ಶೇ.10ರಷ್ಟು ನಿಗದಿಪಡಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ಘೋಷಿಸಿದರು. ಜೊತೆಗೆ, ಬೆಂಗಳೂರು ಉತ್ತರ ಭಾಗದಲ್ಲಿ ಭವ್ಯ ಆಡಳಿತ ಕಚೇರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ವರ್ಷ ದೇಶದಲ್ಲಿ ಬರಗಾಲದ ಸಾಧ್ಯತೆ ಇರುವುದರಿಂದ ರೈತರ ಹಿತಾಸಕ್ತಿಯನ್ನು ಕಾಪಾಡಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಅವರು ಕರೆ ನೀಡಿದರು. ತುಂಗಭದ್ರಾ ಅಣೆಕಟ್ಟು ಹಾಗೂ ಜಲ ಹಂಚಿಕೆ ವಿಚಾರದಲ್ಲಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳು ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಬಂದಿರುವುದನ್ನು ಉಲ್ಲೇಖಿಸಿದ ಅವರು, ನೀರಿನ ವಿಚಾರದಲ್ಲಿ ಸಂಘರ್ಷಕ್ಕಿಂತ ಸಹಕಾರವೇ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಬಳಿಕ ವಿಧಾನಸೌಧದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಮುಖ್ಯಮಂತ್ರಿ, ಬೆಂಗಳೂರನ್ನು ಮತ್ತೆ ಉದ್ಯಾನ ನಗರಿಯನ್ನಾಗಿಸುವ ಉದ್ದೇಶದಿಂದ ಒಂದು ದಿನದಲ್ಲೇ 15 ಲಕ್ಷ ಸಸಿಗಳನ್ನು ನೆಡುವ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದರು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಅರಣ್ಯ ಇಲಾಖೆಯ ಜಾಗಗಳಲ್ಲಿ ಹೊಸ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ನಗರದ ಹಸಿರು ಸಂಪತ್ತನ್ನು ಉಳಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.



