Saturday, June 27, 2026
Google search engine

Homeರಾಜ್ಯಸುದ್ದಿಜಾಲಕೆಂಪೇಗೌಡರ ಆಶಯ ಉಳಿಸಿ, ರೈತರ ಭೂಮಿ ರಕ್ಷಿಸಿ: ರಾಜ್ಯ ರೈತ ಸಂಘ ಆಗ್ರಹ

ಕೆಂಪೇಗೌಡರ ಆಶಯ ಉಳಿಸಿ, ರೈತರ ಭೂಮಿ ರಕ್ಷಿಸಿ: ರಾಜ್ಯ ರೈತ ಸಂಘ ಆಗ್ರಹ

ಕನಕಪುರ: ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಕನಕಪುರ ತಾಲೂಕು ಕಚೇರಿಯಲ್ಲಿ ಇಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ರೈತ ಸಂಘದ ಮುಖಂಡರು, ಭಾಗವಹಿಸಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಮುಖಂಡ ಶ್ರೀ ಕುಮಾರಸ್ವಾಮಿ ಅವರು, “ಕೆಂಪೇಗೌಡರು ಕೇವಲ ಬೆಂಗಳೂರು ಕಟ್ಟಿದವರಲ್ಲ, ಅವರು ರೈತಪರ ಆಡಳಿತಕ್ಕೆ ಮಾದರಿಯಾದವರು. 1537ರಲ್ಲಿ ಬೆಂಗಳೂರು ನಿರ್ಮಾಣ ಮಾಡುವಾಗ ಮೊದಲು ಕೆರೆ-ಕಟ್ಟೆ ಕಟ್ಟಿಸಿದರು. ಧರ್ಮಾಂಬುಧಿ, ಕೆಂಪಾಂಬುಧಿ, ಸಂಪಂಗಿ ಕೆರೆಗಳನ್ನು ನಿರ್ಮಿಸಿ ನೀರಾವರಿಗೆ ಆದ್ಯತೆ ಕೊಟ್ಟರು. ‘ಕೆರೆಗಳಿಲ್ಲದ ಊರು ಕರೆಯದ ಊರು’ ಎಂದು ಸಾರಿದ ಕೆಂಪೇಗೌಡರು ಇಂದಿನ ಆಡಳಿತಗಾರರಿಗೆ ಪಾಠ. ಆದರೆ ಇಂದು ಅದೇ ಕೆಂಪೇಗೌಡರ ಹೆಸರಿನಲ್ಲಿ ಬಿಡದಿ ಟೌನ್‌ಶಿಪ್ ಮಾಡಲು ಕೆರೆಗಳ ಅಚ್ಚುಕಟ್ಟು ಪ್ರದೇಶದ ಪಲವತ್ತಾದ ಭೂಮಿಯನ್ನೇ ಸ್ವಾಧೀನ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ಉಳಿಸುವ ಬದಲು, ರಿಯಲ್ ಎಸ್ಟೇಟ್‌ಗೆ ಭೂಮಿ ಕೊಡುತ್ತಿದ್ದಾರೆ. ನಿಜವಾದ ಕೆಂಪೇಗೌಡ ಜಯಂತಿ ಎಂದರೆ ಅವರಂತೆ ಕೆರೆ ಕಟ್ಟುವುದು, ರೈತರ ಭೂಮಿ ಉಳಿಸುವುದು” ಎಂದು ಕಿಡಿಕಾರಿದರು.

ಕರ್ನಾಟಕ ರಾಜ್ಯ ರೈತಸಂಘದ ಸಂಚಾಲಕರಾದ ಶ್ರೀ ಚೀಲೂರು ಮುನಿರಾಜು* ಮಾತನಾಡಿ, “ಕೆಂಪೇಗೌಡರು ಪೇಟೆ-ಬೀದಿಗಳನ್ನು ನಿರ್ಮಿಸುವಾಗ ಅಲ್ಲಿಗೆ ಬೇಕಾದ ತರಕಾರಿ, ಹಾಲು, ಧಾನ್ಯ ಎಲ್ಲಿಂದ ಬರಬೇಕು ಎಂದು ಯೋಚಿಸಿದ್ದರು. ಅದಕ್ಕೆ ಸುತ್ತಮುತ್ತಲಿನ ಹಳ್ಳಿಗಳನ್ನು, ಕೃಷಿ ಭೂಮಿಯನ್ನು ಉಳಿಸಿಕೊಂಡಿದ್ದರು. ನಾಲ್ಕು ಗೋಪುರ ಕಟ್ಟಿ ‘ಇಲ್ಲಿಯವರೆಗೆ ಬೆಂಗಳೂರು ಬೆಳೆಯಲಿ’ ಎಂದು ಮಿತಿ ಹಾಕಿದ್ದರು. ಆದರೆ ಇಂದಿನ ಸರ್ಕಾರಗಳು ಕೆಂಪೇಗೌಡರ ಹೆಸರು ಹೇಳಿಕೊಂಡು ಬೆಂಗಳೂರನ್ನು ಹಿಗ್ಗಿಸುತ್ತಾ ಹಳ್ಳಿಗಳನ್ನು ನುಂಗುತ್ತಿವೆ. ಮಾಗಡಿ, ಕನಕಪುರ, ರಾಮನಗರದ ಫಲವತ್ತಾದ ಭೂಮಿ ಟೌನ್‌ಶಿಪ್ ಪಾಲಾಗುತ್ತಿದೆ. ಕೆಂಪೇಗೌಡರು 4 ಕೆರೆ, 4 ಮಾರುಕಟ್ಟೆ ಕಟ್ಟಿದರೆ, ಇವರು 4 ಸಾವಿರ ಎಕರೆ ರೈತರ ಭೂಮಿ ಕಿತ್ತುಕೊಳ್ತಾರೆ. ಕೆಂಪೇಗೌಡರ ಆಶಯಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಸರ್ಕಾರಕ್ಕೆ ಹೋರಾಟದ ಮೂಲಕ ತಕ್ಕ ಉತ್ತರ ಕೊಡುತ್ತೇವೆ” ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಮುಖಂಡರುಗಳಾದ ಶಿವರಾಜು ಸಿದ್ದರಾಜು ಕೆಂಪಣ್ಣ ಮಲ್ಲಪ್ಪ ಶಿವಸ್ವಾಮಿ ಶಶಿಕುಮಾರ್ ಪದಾಧಿಕಾರಿಗಳು, ಆಜರಿದ್ದರು .

RELATED ARTICLES
- Advertisment -
Google search engine

Most Popular