Wednesday, July 1, 2026
Google search engine

Homeರಾಜ್ಯಫೇಕ್ ನ್ಯೂಸ್‌ನಿಂದ ಪತ್ರಿಕಾ ವೃತ್ತಿ ಹೊರಬರಬೇಕು : ಸಿಎಂ ಡಿ.ಕೆ.ಶಿವಕುಮಾರ್

ಫೇಕ್ ನ್ಯೂಸ್‌ನಿಂದ ಪತ್ರಿಕಾ ವೃತ್ತಿ ಹೊರಬರಬೇಕು : ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಇಂದಿನ ಸಂದರ್ಭದಲ್ಲಿ ನಿರ್ಭೀತಿಯ ಹಾಗೂ ತತ್ವಬದ್ಧ ಪತ್ರಿಕೋದ್ಯಮ ಅತ್ಯಂತ ಸವಾಲಿನ ಕೆಲಸವಾಗಿದ್ದು, ವೃತ್ತಿಪರ ನೈತಿಕತೆ ಮತ್ತು ಸತ್ಯನಿಷ್ಠೆಯ ಮೂಲಕವೇ ಆ ಸವಾಲನ್ನು ಎದುರಿಸಬಹುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಗಾಂಧಿ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ವೃತ್ತಿಯ ತತ್ವ, ನೈತಿಕತೆ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದರೆ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ. ಫೇಕ್ ನ್ಯೂಸ್‌ನಿಂದ ಪತ್ರಿಕಾ ವೃತ್ತಿ ಹೊರಬರಬೇಕಾದ ಅಗತ್ಯವಿದೆ ಎಂದು ಹೇಳಿದರು.

ಇನ್ನೂ ಇತ್ತೀಚೆಗೆ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂಬ ಸುಳ್ಳು ಸುದ್ದಿಯನ್ನು ಕೆಲವು ಟಿವಿ ವಾಹಿನಿಗಳು ಪ್ರಸಾರ ಮಾಡಿದ್ದವು. ಇದು ಸಂಪೂರ್ಣ ತಪ್ಪು ಮಾಹಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆಯ ವೇಳೆ ತಾವು ನಿತ್ರಾಣಗೊಂಡಿದ್ದ ಘಟನೆಯನ್ನು ಕೆಲವರು ತಿರುಚಿ, “ಕುಡಿದು ನಡೆದುಕೊಂಡು ಬರುತ್ತಿದ್ದಾರೆ” ಎಂಬ ರೀತಿಯಲ್ಲಿ ಬಿಂಬಿಸಿದ್ದು ಜನರಲ್ಲಿ ತಪ್ಪು ಸಂದೇಶ ಹರಡುವ ಉದ್ದೇಶಪೂರ್ವಕ ಪ್ರಯತ್ನವಾಗಿತ್ತು ಎಂದು ಆರೋಪಿಸಿದರು. ನಾನು ತಪ್ಪು ಮಾಡಿದ್ದರೆ ಅದನ್ನು ಬಹಿರಂಗಪಡಿಸಿ. ಆದರೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಬೇಡಿ ಅಥವಾ ಪ್ರಸಾರ ಮಾಡಬೇಡಿ. ಸುದ್ದಿ ಪ್ರಕಟವಾಗುವವರೆಗೆ ಅದು ಪತ್ರಕರ್ತರ ಹೊಣೆಗಾರಿಕೆ. ಪ್ರಕಟವಾದ ಬಳಿಕ ಅದು ಸಮಾಜದ ಆಸ್ತಿಯಾಗುತ್ತದೆ. ಆದ್ದರಿಂದ ಪ್ರತಿಯೊಂದು ಸುದ್ದಿಯಲ್ಲೂ ಸತ್ಯ, ಪ್ರಾಮಾಣಿಕತೆ ಮತ್ತು ಜವಾಬ್ದಾರಿತನ ಇರಬೇಕು ಎಂದು ಅವರು ಸಲಹೆ ನೀಡಿದರು.

ಮಹಾತ್ಮ ಗಾಂಧಿ ಸೇರಿದಂತೆ ಅನೇಕ ಮಹನೀಯರು ಪತ್ರಿಕೋದ್ಯಮದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ವೃತ್ತಿಯ ಘನತೆಯನ್ನು ಹೆಚ್ಚಿಸಿದ್ದಾರೆ. ಆ ಆದರ್ಶ ಪರಂಪರೆಯನ್ನು ಇಂದಿನ ಪತ್ರಕರ್ತರು ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಾರ್ತಾಭಾರತಿ ಸಂಪಾದಕ ಅಬುಸಾಲಂ ಪುತ್ತಿಗೆ ಪ್ರಧಾನ ಭಾಷಣ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಆರ್.ಪೂರ್ಣಿಮಾ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನುಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಅನುಚೇತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular