Wednesday, July 1, 2026
Google search engine

Homeಕ್ರೀಡೆಫಿಫಾ ವಿಶ್ವಕಪ್ 2026: ಬೋಸ್ನಿಯಾ ವಿರುದ್ಧದ 'ರೌಂಡ್ ಆಫ್ 32' ಪಂದ್ಯಕ್ಕೆ ಯುಎಸ್ಎ ಸಜ್ಜು; ಕೋಚ್...

ಫಿಫಾ ವಿಶ್ವಕಪ್ 2026: ಬೋಸ್ನಿಯಾ ವಿರುದ್ಧದ ‘ರೌಂಡ್ ಆಫ್ 32’ ಪಂದ್ಯಕ್ಕೆ ಯುಎಸ್ಎ ಸಜ್ಜು; ಕೋಚ್ ಮೌರಿಸಿಯೊ ಪೊಚೆಟ್ಟಿನೊ

ಕ್ಯಾಲಿಫೋರ್ನಿಯಾ : ಫಿಫಾ ವಿಶ್ವಕಪ್ 2026ರ ‘ರೌಂಡ್ ಆಫ್ 32’ ಹಂತದಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯಕ್ಕೆ ಅಮೆರಿಕ (ಯುಎಸ್ಎ) ತಂಡ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಮುಖ್ಯ ಕೋಚ್ ಮೌರಿಸಿಯೊ ಪೊಚೆಟ್ಟಿನೊ ತಿಳಿಸಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಸ್ಟೇಡಿಯಂನಲ್ಲಿ ಈ ಬಿರುಸಿನ ಹಣಾಹಣಿ ನಡೆಯಲಿದೆ.

ಎದುರಾಳಿ ಬೋಸ್ನಿಯಾ ತಂಡವನ್ನು ಶ್ಲಾಘಿಸಿದ 54 ವರ್ಷದ ಪೊಚೆಟ್ಟಿನೊ, “ಬೋಸ್ನಿಯಾ ಅತ್ಯಂತ ಜಿದ್ದಾಜಿದ್ದಿನ, ಆಕ್ರಮಣಕಾರಿ ಮತ್ತು ದೈಹಿಕ ಸಾಮರ್ಥ್ಯ ಹೊಂದಿರುವ ಬಲಿಷ್ಠ ತಂಡವಾಗಿದೆ. ಅವರು ಅತ್ಯಂತ ಶಿಸ್ತುಬದ್ಧವಾಗಿದ್ದು, ಉತ್ತಮ ತರಬೇತುದಾರರನ್ನು ಹೊಂದಿದ್ದಾರೆ” ಎಂದು ಫಿಫಾಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿಯೊಂದು ಪಂದ್ಯವೂ ನಮಗೆ ಫೈನಲ್ ಇದ್ದಂತೆ : ಯುಎಸ್ಎ ಕೋಚ್

ನಾಕೌಟ್ ಪಂದ್ಯದ ಒತ್ತಡ ಮತ್ತು ತೀವ್ರತೆಯ ಬಗ್ಗೆ ಮಾತನಾಡಿದ ಪೊಚೆಟ್ಟಿನೊ, ತಂಡವು ಯಾವುದೇ ಸವಾಲಿಗೆ ಸಿದ್ಧವಾಗಿದೆ ಎಂದಿದ್ದಾರೆ.
“ನಾಳಿನ ಪಂದ್ಯವು ನಮಗೆ ಫೈನಲ್ ಇದ್ದಂತೆ. ಇದಕ್ಕೂ ಮುನ್ನ ನಾವು ಪರಾಗ್ವೆ ವಿರುದ್ಧ ಆಡಿದ ಪಂದ್ಯವೂ ನಮಗೆ ಫೈನಲ್ ಆಗಿತ್ತು. ಇಂತಹದೇ ತೀವ್ರತೆ ಮತ್ತು ಭಾವನೆಗಳನ್ನು ಆಟಗಾರರಲ್ಲಿ ಮೂಡಿಸಲು ನಾವು ವಿಶ್ವಕಪ್‌ಗೂ ಮುನ್ನ ಜರ್ಮನಿ (ಚಿಕಾಗೋ), ಸೆನೆಗಲ್ (ಷಾರ್ಲೆಟ್), ಉರುಗ್ವೆ (ಟ್ಯಾಂಪಾ) ಮತ್ತು ಪರಾಗ್ವೆ (ಫಿಲಡೆಲ್ಫಿಯಾ) ವಿರುದ್ಧ ಸೌಹಾರ್ದ ಪಂದ್ಯಗಳನ್ನು ಆಡಿದ್ದೆವು,” ಎಂದು ಅವರು ವಿವರಿಸಿದರು.

ಪೆನಾಲ್ಟಿ ಶೂಟೌಟ್‌ಗೂ ವಿಶೇಷ ತರಬೇತಿ

ಪಂದ್ಯವು ಡ್ರಾವಾಗಿ ಪೆನಾಲ್ಟಿ ಶೂಟೌಟ್‌ಗೆ ತಲುಪಿದರೂ ಎದುರಿಸಲು ಅಮೆರಿಕ ಸಿದ್ಧತೆ ಮಾಡಿಕೊಂಡಿದೆ. “ಪೆನಾಲ್ಟಿ ಶೂಟೌಟ್ ಎದುರಿಸಲು ನಾವು ಕೆಲವು ತಾಂತ್ರಿಕ ಕಂಪನಿಗಳೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ಇದು ಅತ್ಯಂತ ಪ್ರಮುಖವಾದ ಕ್ಷೇತ್ರವಾಗಿದೆ. ಆಟಗಾರರಿಗೆ ಇಂತಹ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಲು ಮತ್ತು ಅವರ ಸಾಮರ್ಥ್ಯವನ್ನು ಸುಧಾರಿಸಲು ನಾವು ಅಗತ್ಯ ಪರಿಕರ ಹಾಗೂ ತಂತ್ರಗಳನ್ನು ನೀಡುತ್ತಿದ್ದೇವೆ,” ಎಂದು ಕೋಚ್ ಪೊಚೆಟ್ಟಿನೊ ಹೇಳಿದರು.

ಯಾರು ಗೆಲ್ಲಬಹುದು ಎಂಬ ‘ಫೇವರಿಟ್’ ಹಣೆಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾವು ಬೋಸ್ನಿಯಾ ತಂಡವನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ. ನಾವೇ ಗೆಲ್ಲುವ ನೆಚ್ಚಿನ ತಂಡ ಎಂದು ನಾನು ಭಾವಿಸುವುದಿಲ್ಲ. ಈ ವಿಶ್ವಕಪ್ ಎಷ್ಟು ಕಠಿಣವಾಗಿದೆ ಎಂಬುದನ್ನು ಕಳೆದ ಕೆಲವು ದಿನಗಳಿಂದ ನಾವೆಲ್ಲರೂ ನೋಡುತ್ತಿದ್ದೇವೆ. ಪಂದ್ಯ ಮುಗಿದ ನಂತರ ಯಾರು ಫೇವರಿಟ್ ಎಂದು ಮಾತನಾಡುವುದು ಸುಲಭ, ಪಂದ್ಯಕ್ಕೂ ಮುನ್ನ ಅಲ್ಲ,” ಎಂದರು.

ಯುಎಸ್ಎ ತಂಡವೇ ಫೇವರಿಟ್ ಎಂದ ಬೋಸ್ನಿಯಾ ಕೋಚ್

ಮತ್ತೊಂದೆಡೆ ಬೋಸ್ನಿಯಾ ಮತ್ತು ಹರ್ಜೆಗೋವಿನಾ ತಂಡದ ಮುಖ್ಯ ಕೋಚ್ ಸೆರ್ಗೆಜ್ ಬಾರ್ಬರೆಜ್ ಅವರು ಯುಎಸ್ಎ ತಂಡವನ್ನೇ ಗೆಲ್ಲುವ ನೆಚ್ಚಿನ ತಂಡ ಎಂದು ಕರೆದಿದ್ದಾರೆ.

“ವಿಶ್ವ ರ‍್ಯಾಂಕಿಂಗ್‌ ನಲ್ಲಿ ಯುಎಸ್ಎ ನಮಗಿಂತ ಮುಂದಿದೆ. ಅವರು ತಾಯ್ನಾಡಿನಲ್ಲಿ ಆಡುತ್ತಿದ್ದಾರೆ ಮತ್ತು ಅವರ ಬಳಿ ಅತ್ಯುತ್ತಮ ಆಟಗಾರರಿದ್ದಾರೆ. ಹೀಗಾಗಿ ಅವರೇ ಫೇವರಿಟ್,” ಎಂದು 54 ವರ್ಷದ ಬಾರ್ಬರೆಜ್ ಒಪ್ಪಿಕೊಂಡಿದ್ದಾರೆ.

ಆದರೆ ಇದೇ ವೇಳೆ ಅವರು ತಮ್ಮ ತಂಡದ ರಣತಂತ್ರವನ್ನೂ ಸ್ಪಷ್ಟಪಡಿಸಿದರು. “ನಾವು ಅಂಡರ್ ಡಾಗ್ (ಕಡಿಮೆ ಅಂದಾಜಿಸಲಾದ ತಂಡ) ಆಗಿರುವುದಕ್ಕೆ ನಮಗೇನೂ ಬೇಸರವಿಲ್ಲ. ಪಂದ್ಯ ಆರಂಭವಾದ ಮೇಲೆ ರ‍್ಯಾಂಕಿಂಗ್ ಮುಖ್ಯವಾಗುವುದಿಲ್ಲ, ಮೈದಾನದಲ್ಲಿ ಏನು ನಡೆಯುತ್ತದೆ ಎಂಬುದು ಮಾತ್ರ ಮುಖ್ಯ. ನಾವು ಎದುರಾಳಿ ತಂಡವನ್ನು ಅಧ್ಯಯನ ಮಾಡಿದ್ದೇವೆ ಮತ್ತು ನಮ್ಮದೇ ಆದ ಗೇಮ್ ಪ್ಲಾನ್ ಹೊಂದಿದ್ದೇವೆ. ಕಳೆದ 18 ತಿಂಗಳುಗಳಿಂದ ನಾವು ಯಾವ ಶೈಲಿಯಲ್ಲಿ ಆಡುತ್ತಾ ಬಂದಿದ್ದೇವೆಯೋ, ಅದನ್ನೇ ಮುಂದುವರಿಸಲಿದ್ದೇವೆ. ಪಂದ್ಯ ಮುಗಿದ ಬಳಿಕ ನನ್ನ ಆಟಗಾರರು ಒಟ್ಟಾಗಿ ವಿಜಯದ ಸಂಭ್ರಮ ಆಚರಿಸುವುದನ್ನು ನೋಡುವುದೇ ನನ್ನ ದೊಡ್ಡ ಆಸೆ,” ಎಂದು ಬಾರ್ಬರೆಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular