ಗುಬ್ಬಿ : ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ-73ರಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕಳ್ಳಿಪಾಳ್ಯ ಗೇಟ್ನಿಂದ ಗುಬ್ಬಿ ಹಾಗೂ ತುಮಕೂರಿನ ಶಾಲೆ-ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಬಸ್ಗಾಗಿ ಕಾದರೂ ಯಾವುದೇ ಬಸ್ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಸ್ಥಳೀಯರ ಬೆಂಬಲದೊಂದಿಗೆ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಶಾಲಾ ವೇಳೆಗೆ ನಿಯಮಿತ ಬಸ್ ಸಂಚಾರ ಕಲ್ಪಿಸುವಂತೆ ಒತ್ತಾಯಿಸಿದರು.
ಈ ಮಾರ್ಗದಲ್ಲಿ ಪ್ರತಿದಿನ ಹಲವು ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುತ್ತಿದ್ದರೂ, ಕಳ್ಳಿಪಾಳ್ಯ ಗೇಟ್ ಬಸ್ ನಿಲ್ದಾಣದಲ್ಲಿ ನಿಲ್ಲದೆ ವೇಗವಾಗಿ ತೆರಳುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ಅಪರೂಪಕ್ಕೆ ನಿಲ್ಲುವ ಒಂದೆರಡು ಬಸ್ಗಳಲ್ಲಿ ಅತಿಯಾದ ಜನಸಂದಣಿ ಇರುವುದರಿಂದ ಪ್ರತಿದಿನ ಶಾಲೆ ಮತ್ತು ಕಾಲೇಜುಗಳಿಗೆ ಸಮಯಕ್ಕೆ ತಲುಪಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಕಳ್ಳಿಪಾಳ್ಯ, ಅಡಗೂರು, ಧೂಳನಹಳ್ಳಿ, ಹೊಸಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಸರ್ಕಾರಿ ಬಸ್ಗಳನ್ನೇ ಅವಲಂಬಿಸಿ ವಿದ್ಯಾಭ್ಯಾಸಕ್ಕಾಗಿ ಗುಬ್ಬಿ ಮತ್ತು ತುಮಕೂರಿಗೆ ತೆರಳುತ್ತಿದ್ದಾರೆ. ಬಸ್ ಸೌಲಭ್ಯ ಕೊರತೆಯಿಂದ ವಿದ್ಯಾರ್ಥಿಗಳು ತಡವಾಗಿ ಶಾಲೆ-ಕಾಲೇಜುಗಳಿಗೆ ತಲುಪುತ್ತಿದ್ದು, ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ ಎಂದು ಹೇಳಿದರು. ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗುಬ್ಬಿ ಸಿಪಿಐ ರಾಘವೇಂದ್ರ ನೇತೃತ್ವದ ಪೊಲೀಸ್ ತಂಡ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿತು. ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.



