Thursday, July 2, 2026
Google search engine

Homeರಾಜಕೀಯಕಾಂಗ್ರೆಸ್–ಆರ್‌ಎಸ್‌ಎಸ್‌ ರಾಜಕೀಯ ವಾಗ್ವಾದದ ನಡುವೆಯೇ ರಾಜ್ಯಕ್ಕೆ ಮೋಹನ್ ಭಾಗವತ್ ಭೇಟಿ

ಕಾಂಗ್ರೆಸ್–ಆರ್‌ಎಸ್‌ಎಸ್‌ ರಾಜಕೀಯ ವಾಗ್ವಾದದ ನಡುವೆಯೇ ರಾಜ್ಯಕ್ಕೆ ಮೋಹನ್ ಭಾಗವತ್ ಭೇಟಿ

ಬೆಳಗಾವಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಡಾ.ಮೋಹನ್ ಭಾಗವತ್ ಜುಲೈ 6ರಂದು ಬೆಳಗಾವಿಗೆ ಆಗಮಿಸಲಿದ್ದು, ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚಿನ ಕಾಂಗ್ರೆಸ್–ಆರ್‌ಎಸ್‌ಎಸ್‌ ರಾಜಕೀಯ ವಾಗ್ವಾದದ ನಡುವೆಯೇ ಅವರ ರಾಜ್ಯ ಭೇಟಿ ಮಹತ್ವ ಪಡೆದುಕೊಂಡಿದೆ.

ಈ ಬಗ್ಗೆ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಜುಲೈ 6ರಿಂದ ಸಂಘದ ವಿವಿಧ ಹಂತಗಳ ಸಭೆಗಳು ಆರಂಭವಾಗಲಿವೆ. ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಜುಲೈ 10ರಿಂದ 12ರವರೆಗೆ ನಡೆಯಲಿದ್ದು, ದೇಶದ 11 ಕ್ಷೇತ್ರಗಳು ಹಾಗೂ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಮತ್ತು ಸಹ ಕ್ಷೇತ್ರ ಪ್ರಚಾರಕರು ಭಾಗವಹಿಸಲಿದ್ದಾರೆ. ಜೊತೆಗೆ ಸಂಘಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಸಹ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ.

ಇನ್ನೂ ಈ ಸಭೆಯಲ್ಲಿ ಶಾಖಾ ಮಟ್ಟದ ವಾರ್ಷಿಕ ಕಾರ್ಯಯೋಜನೆ, ಸಂಘ ಶತಾಬ್ದಿ ವರ್ಷದ ಅಂಗವಾಗಿ ನಡೆದ ಕಾರ್ಯಚಟುವಟಿಕೆಗಳ ಪರಿಶೀಲನೆ, ಶಾಖೆಗಳ ವಿಸ್ತರಣೆ, 2026ರ ಸಂಘ ಶಿಕ್ಷಣ ವರ್ಗಗಳ ವಿಮರ್ಶೆ ಹಾಗೂ ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಸವಿಸ್ತಾರ ಚರ್ಚೆ ನಡೆಯಲಿದ್ದು, ಇದೇ ವೇಳೆ 2026–27ರ ಸರಸಂಘಚಾಲಕರ ಪ್ರವಾಸ ಯೋಜನೆ, ಸಂಘ ಶತಾಬ್ದಿ ವರ್ಷದ ಉಳಿದ ಕಾರ್ಯಕ್ರಮಗಳು ಹಾಗೂ ಪ್ರಸ್ತುತ ರಾಷ್ಟ್ರೀಯ ಪರಿಸ್ಥಿತಿ, ಜನಗಣತಿ ಸೇರಿದಂತೆ ಸಮಕಾಲೀನ ಪ್ರಮುಖ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.

ಸಭೆಯಲ್ಲಿ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹ ಸರ್ಕಾರ್ಯವಾಹರಾದ ಡಾ.ಕೃಷ್ಣಗೋಪಾಲ್, ಸಿ.ಆರ್.ಮುಕುಂದ, ಅರುಣ್ ಕುಮಾರ್, ರಾಮದತ್ತ, ಆಲೋಕ್ ಕುಮಾರ್, ಅತುಲ್ ಲಿಮಯೆ ಸೇರಿದಂತೆ ಅಖಿಲ ಭಾರತೀಯ ಕಾರ್ಯ ವಿಭಾಗದ ಪ್ರಮುಖರು ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular