ನವದೆಹಲಿ : ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಅವರು, ವಿಶ್ವದಲ್ಲೇ ಅತ್ಯಂತ ಕಡಿಮೆ ಎಸೆತಗಳಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬುಧವಾರ ರಾತ್ರಿ ನಡೆದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಭಿಷೇಕ್ ಕೇವಲ 24 ಎಸೆತಗಳಲ್ಲಿ 59 ರನ್ (6 ಬೌಂಡರಿ, 4 ಸಿಕ್ಸರ್) ಸಿಡಿಸಿ ಮಿಂಚಿದರು. ಈ ಇನ್ನಿಂಗ್ಸ್‌ನಲ್ಲಿ ಬಾರಿಸಿದ 4 ಸಿಕ್ಸರ್‌ಗಳ ನೆರವಿನಿಂದ ಅವರು ಈ ಮೈಲಿಗಲ್ಲು ತಲುಪಿದರು.
ಕೇವಲ 785 ಎಸೆತಗಳಲ್ಲಿ 100 ಸಿಕ್ಸರ್!
ಅಭಿಷೇಕ್ ಶರ್ಮಾ ಕೇವಲ 785 ಎಸೆತಗಳಲ್ಲಿ 100 ಸಿಕ್ಸರ್‌ಗಳ ಗಡಿ ದಾಟುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಈ ಹಾದಿಯಲ್ಲಿ ಅವರು ವಿಶ್ವದ ದಿಗ್ಗಜ ಹಾರ್ಡ್ ಹಿಟ್ಟರ್‌ಗಳನ್ನು ಹಿಂದಿಕ್ಕಿದ್ದಾರೆ.
ಕಡಿಮೆ ಎಸೆತಗಳಲ್ಲಿ 100 ಸಿಕ್ಸರ್ ಬಾರಿಸಿದ ಟಾಪ್-5 ಬ್ಯಾಟರ್ಸ್
ಬ್ಯಾಟ್ಸ್‌ಮನ್ ಎಸೆತಗಳ ಸಂಖ್ಯೆ ದೇಶ
ಅಭಿಷೇಕ್ ಶರ್ಮಾ 785 ಭಾರತ
ಎವಿನ್ ಲೂಯಿಸ್ 789 ವೆಸ್ಟ್ ಇಂಡೀಸ್
ಫಿನ್ ಅಲೆನ್ 871 ನ್ಯೂಜಿಲೆಂಡ್
ಟಿಮ್ ಡೇವಿಡ್ 931 ಆಸ್ಟ್ರೇಲಿಯಾ
ಕಾಲಿನ್ ಮುನ್ರೊ 961 ನ್ಯೂಜಿಲೆಂಡ್
ಸೂರ್ಯಕುಮಾರ್ ಯಾದವ್ 1008 ಭಾರತ
ಇನ್ನಿಂಗ್ಸ್ ಲೆಕ್ಕದಲ್ಲೂ 2ನೇ ಅತಿ ವೇಗದ ಸಾಧನೆ
ಟೆಸ್ಟ್ ಆಡುವ ದೇಶಗಳ ಪೈಕಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 100 ಸಿಕ್ಸರ್ ಪೂರೈಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಭಿಷೇಕ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್‌ನ ಎವಿನ್ ಲೂಯಿಸ್ (42 ಇನ್ನಿಂಗ್ಸ್) ಮೊದಲ ಸ್ಥಾನದಲ್ಲಿದ್ದರೆ, ಅಭಿಷೇಕ್ 48 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ನಂತರದ ಸ್ಥಾನಗಳಲ್ಲಿ ಸೂರ್ಯಕುಮಾರ್ ಯಾದವ್ (49), ಕ್ರಿಸ್ ಗೇಲ್ (49) ಮತ್ತು ಕಾಲಿನ್ ಮುನ್ರೊ (57) ಇದ್ದಾರೆ.
ಭಾರತೀಯರ ಸಾಧನೆ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ನಂತರ ಅಂತರರಾಷ್ಟ್ರೀಯ ಟಿ20ಯಲ್ಲಿ 100 ಸಿಕ್ಸರ್ ಬಾರಿಸಿದ ಒಟ್ಟಾರೆ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೂ ಅಭಿಷೇಕ್ ಭಾಜನರಾಗಿದ್ದಾರೆ. (ಏಜೆನ್ಸಿಸ್)



