Friday, July 3, 2026
Google search engine

Homeಅಪರಾಧಕುಮಾರಕೃಪಾ ಹೆಸರಲ್ಲಿ ಸೈಬರ್ ವಂಚನೆ : ತಹಶೀಲ್ದಾರ್‌ಗೆ ₹99 ಸಾವಿರ ನಾಮ

ಕುಮಾರಕೃಪಾ ಹೆಸರಲ್ಲಿ ಸೈಬರ್ ವಂಚನೆ : ತಹಶೀಲ್ದಾರ್‌ಗೆ ₹99 ಸಾವಿರ ನಾಮ

ಬೆಂಗಳೂರು : ಆನ್‌ಲೈನ್ ಮೂಲಕ ಕುಮಾರಕೃಪಾ ಅತಿಥಿ ಗೃಹದಲ್ಲಿ ಕೊಠಡಿ ಬುಕ್ ಮಾಡಲು ಯತ್ನಿಸಿದ ತಹಶೀಲ್ದಾರ್ ಒಬ್ಬರು ಸೈಬರ್ ವಂಚಕರಿಂದ ₹99 ಸಾವಿರಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಇಂಡಿ ತಾಲೂಕಿನ ಮಾಜಿ ತಹಶೀಲ್ದಾರ್ ಬಿ.ಎಸ್.ಕಡಕಭಾವಿ ಅವರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮಾಹಿತಿಯ ಪ್ರಕಾರ, ಜೂನ್ 23ರಂದು ಖಾಸಗಿ ಕಾರ್ಯಕ್ರಮಕ್ಕಾಗಿ ಪತ್ನಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ್ದ ಕಡಕಭಾವಿ ಅವರು ವಾಸ್ತವ್ಯಕ್ಕಾಗಿ ಗೂಗಲ್‌ನಲ್ಲಿ ಕುಮಾರಕೃಪಾ ಗೆಸ್ಟ್‌ಹೌಸ್ ಎಂದು ಹುಡುಕಿದ್ದಾರೆ. ಈ ವೇಳೆ ಕಾಣಿಸಿಕೊಂಡ ವಾಟ್ಸಪ್ ಲಿಂಕ್ ಮೂಲಕ ಅವರು ಸಂಪರ್ಕ ಸಾಧಿಸಿದ್ದು, ಅಪರಿಚಿತ ವ್ಯಕ್ತಿಯೊಬ್ಬರು ಕೊಠಡಿ ಬುಕ್ಕಿಂಗ್ ಹಾಗೂ ಪಾವತಿಗಾಗಿ ಸ್ಕ್ಯಾನರ್ ಕಳುಹಿಸಿದ್ದಾನೆ.

ಮೊದಲಿಗೆ ₹14,238 ಪಾವತಿಸಿದ ಬಳಿಕ, “ಪಾವತಿ ಆಗಿಲ್ಲ” ಎಂದು ಹೇಳಿದ ವಂಚಕನು ಮತ್ತೆ ಹಣ ಕಳುಹಿಸಲು ಒತ್ತಡ ಹೇರಿದ್ದಾನೆ. ಬಳಿಕ ಕ್ರಮವಾಗಿ ₹13,560, ₹28,476 ಹಾಗೂ ₹42,714 ಸೇರಿ ಒಟ್ಟು ₹99,666 ಹಣವನ್ನು 5 ಹಂತಗಳಲ್ಲಿ ವರ್ಗಾಯಿಸಿದ್ದು, ನಂತರವೂ ಹಣ ಪಾವತಿ ಆಗಿಲ್ಲ ಎಂದು ಹೇಳಿದ ವಂಚಕನ ವರ್ತನೆಯಿಂದ ಅನುಮಾನಗೊಂಡ ಕಡಕಭಾವಿ ಅವರು ವಿಚಾರಿಸಿದಾಗ, ಕುಮಾರಕೃಪಾ ಅತಿಥಿ ಗೃಹಕ್ಕೆ ಯಾವುದೇ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯೇ ಇಲ್ಲ ಎಂಬುದು ತಿಳಿದುಬಂದಿದೆ.

ಇದರಿಂದ ತಾವು ವಂಚನೆಗೆ ಒಳಗಾಗಿರುವುದು ಸ್ಪಷ್ಟವಾದ ಬಳಿಕ ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಣ ವರ್ಗಾವಣೆ ವಿವರಗಳನ್ನು ಪರಿಶೀಲಿಸುತ್ತಿದ್ದು, ವಂಚಕರನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

RELATED ARTICLES
- Advertisment -
Google search engine

Most Popular