Friday, July 3, 2026
Google search engine

Homeರಾಜ್ಯಕನ್ನಡ ಮೂರನೇ ಭಾಷೆ ಆದೇಶಕ್ಕೆ ಕರವೇ ವಿರೋಧ : ತಕ್ಷಣ ಹಿಂಪಡೆಯಲು ಆಗ್ರಹ

ಕನ್ನಡ ಮೂರನೇ ಭಾಷೆ ಆದೇಶಕ್ಕೆ ಕರವೇ ವಿರೋಧ : ತಕ್ಷಣ ಹಿಂಪಡೆಯಲು ಆಗ್ರಹ

ಬೆಂಗಳೂರು : ರಾಜ್ಯದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಜಾರಿಗೊಳಿಸುವಂತೆ ಎನ್‌ಸಿಇಆರ್‌ಟಿ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆಗ್ರಹಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಎನ್‌ಸಿಇಆರ್‌ಟಿ ನೀಡಿರುವ ಈ ಸೂಚನೆ ರಾಜ್ಯದ ಭಾಷಾ ನೀತಿ, ಸಂವಿಧಾನದ ಒಕ್ಕೂಟ ವ್ಯವಸ್ಥೆ ಹಾಗೂ ಕರ್ನಾಟಕದ ಸ್ವಾಭಿಮಾನದ ಮೇಲಿನ ನೇರ ದಾಳಿ ಎಂದು ಕಿಡಿಕಾರಿದ್ದಾರೆ.

ಕರ್ನಾಟಕ ಕನ್ನಡ ಭಾಷಾ ಕಲಿಕಾ ಅಧಿನಿಯಮ–2015 ಪ್ರಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕು ಎಂಬ ನಿಯಮವಿದ್ದು, ಈ ನಿಯಮ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಿಗೂ ಅನ್ವಯಿಸುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಪರಿಗಣಿಸುವ ನಿರ್ಧಾರ ರಾಜ್ಯದ ಕಾನೂನಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ ರಾಜ್ಯದಲ್ಲಿ ಈಗಾಗಲೇ ಸ್ಪಷ್ಟವಾದ ಭಾಷಾ ನೀತಿ ಇದ್ದರೂ, ಅದನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಆದೇಶ ಹೊರಡಿಸಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ನಡೆ ಎಂದು ಕರವೇ ಆರೋಪಿಸಿದೆ. ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಹಾಗೂ ರಾಜ್ಯದ ಭಾಷಾ ಹಕ್ಕಿಗೆ ಗೌರವ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ರೀತಿಯ ಕ್ರಮಗಳನ್ನು ಬಲವಂತವಾಗಿ ಜಾರಿಗೊಳಿಸಲು ಯತ್ನಿಸಿದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಯಲಿದೆ ಎಂದು ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular