ಮಂಡ್ಯ : ಸಕ್ಕರೆ ನಾಡು ಮಂಡ್ಯದ ಹಳೆಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಔಷಧಗಳನ್ನು ತುಂಬಿಕೊಂಡು ಸಾಗುತ್ತಿದ್ದ ಕಂಟೇನರ್ ಲಾರಿ ಚಾಲಕನಿಗೆ ಐಷಾರಾಮಿ ಕಾರಿನಲ್ಲಿ ಬಂದ ಯುವಕರ ಗುಂಪು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ಮಾಹಿತಿಯ ಪ್ರಕಾರ, ನಿನ್ನೆ ಮುಂಜಾನೆ ಸುಮಾರು 4 ಗಂಟೆ ಸಮಯದಲ್ಲಿ ಈ ಭೀಕರ ದರೋಡೆ ಯತ್ನ ನಡೆದಿದೆ. ಬೆಂಗಳೂರಿನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಮೆಡಿಸಿನ್ (ಔಷಧ) ಲೋಡ್ ಮಾಡಿಕೊಂಡು ಮಂಡ್ಯದ ಕಡೆಗೆ ಬರುತ್ತಿದ್ದ ಕಂಟೇನರ್ ಲಾರಿಗೆ ಐಷಾರಾಮಿ ಕಾರಿನಲ್ಲಿ ಬಂದ ಐದು ಮಂದಿ ಯುವಕರ ತಂಡ ಅಡ್ಡ ಬಂದಿತ್ತು. ಈ ವೇಳೆ ಇಬ್ಬರಿಗೂ ವಾಗ್ವಾದ ನಡೆದಿತ್ತು.
ಕಂಟೇನರ್‌ನಲ್ಲಿ ಮೈಸೂರು ಮೂಲದ ಚಾಲಕನೊಬ್ಬನೇ ಇದ್ದು, ಮುಂಜಾನೆಯ ನಿರ್ಜನ ರಸ್ತೆಯಲ್ಲಿ ಆ ಕಾರಿನಲ್ಲಿದ್ದವರ ವಿಚಿತ್ರ ವರ್ತನೆಯನ್ನು ಕಂಡು ಆತ ಲಾರಿ ನಿಲ್ಲಿಸದೆ ಜಾಣತನದಿಂದ ಮುಂದೆ ಚಲಾಯಿಸಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ಐಷಾರಾಮಿ ಕಾರಿನಲ್ಲಿದ್ದ ಪ್ರಭಾವಿ ಉದ್ಯಮಿಯ ಪುತ್ರ ಲಾರಿ ಚಾಲಕನಿಗೆ ಅವಾಜ್ ಹಾಕಿ ಬೆದರಿಸಿದ್ದಾನೆ ಎನ್ನಲಾಗಿದೆ. ತೀವ್ರ ಭಯಭೀತರಾದ ಚಾಲಕ, ಪ್ರಾಣಭಯದಿಂದ ತಕ್ಷಣ ಅಲ್ಲಿಂದ ಲಾರಿ ಸಮೇತ ಹೊರಟು ಹೋಗಿದ್ದಾನೆ.
ಘಟನೆಯ ನಂತರ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದ ಕೆಲ ಗಂಟೆಗಳ ಕಾಲ ಯಾರಿಗೂ ವಿಷಯ ತಿಳಿಯದಿದ್ದರೂ, ನಂತರ ಸಾರ್ವಜನಿಕ ವಲಯದಲ್ಲಿ ಬಾಯಿಂದ ಬಾಯಿಗೆ ಹರಡತೊಡಗಿತು. ವಿಷಯದ ಗಂಭೀರತೆಯನ್ನು ಅರಿತು ತಕ್ಷಣ ಎಚ್ಚೆತ್ತ ಮಂಡ್ಯ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಮಂಡ್ಯ ಡಿವೈಎಸ್ಪಿ ಕಚೇರಿಯಲ್ಲಿ ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಚಾಲಕನ ಹೇಳಿಕೆ ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



