ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳು ಮತ್ತು 2002ರ ಮತದಾರರ ಪಟ್ಟಿಗಳು ಕನ್ನಡದಲ್ಲೇ ಮಾತ್ರ ಲಭ್ಯವಿರುವುದಾಗಿ ಆರೋಪಗಳು ಕೇಳಿಬಂದಿದ್ದು, ಇದು ಹೊಸ ವಿವಾದಕ್ಕೆ ಕಾರಣವಾಗಿದೆ.
ಕನ್ನಡ ಓದಲು ಮತ್ತು ಬರೆಯಲು ಸಾಧ್ಯವಿಲ್ಲದ ಕಾಸ್ಮೋಪಾಲಿಟನ್ ನಗರವಾದ ಬೆಂಗಳೂರಿನಲ್ಲಿ ಈ ಭಾಷಾ ನಿರ್ಬಂಧವು ಅರ್ಹ ಮತದಾರರು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಡ್ಡಿಯಾಗಬಹುದು ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ನಗರದ ಬಹುಸಂಖ್ಯಾತ ಜನಸಂಖ್ಯೆಯಲ್ಲಿ ಸುಮಾರು ಶೇ.40ರಷ್ಟು ಮಂದಿ ಕನ್ನಡ ಓದಲು ಕಷ್ಟಪಡುತ್ತಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ SIR ದಾಖಲೆಗಳನ್ನು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಲ್ಲೂ ಲಭ್ಯವಾಗುವಂತೆ ಮಾಡಬೇಕೆಂದು ಆಗ್ರಹ ವ್ಯಕ್ತವಾಗಿದೆ.
ಕೆಲವರು Gen Z ಹಾಗೂ ಹೊಸ ನಿವಾಸಿಗಳು ಇಂಗ್ಲಿಷ್‌ನಲ್ಲಿ ಹೆಚ್ಚು ಆರಾಮವಾಗಿ ಸಂವಹನ ಮಾಡುತ್ತಾರೆ ಎಂದು ಹೇಳಿದ್ದು, ಬಹುಭಾಷಾ ಫಾರ್ಮ್‌ಗಳು ಮತದಾರರ ಪಾಲ್ಗೊಳ್ಳುವಿಕೆಯನ್ನು ಸುಲಭಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
CHRI ನಿರ್ದೇಶಕ ವೆಂಕಟೇಶ್ ನಾಯಕ್ ಅವರು ಚುನಾವಣಾ ಆಯೋಗದ ಉದ್ದೇಶ ಅಡೆತಡೆಗಳನ್ನು ಕಡಿಮೆ ಮಾಡುವುದು ಆಗಬೇಕು ಎಂದು ಹೇಳಿದ್ದಾರೆ. ದೇಶಾದ್ಯಂತ ಕೆಲಸ ಮತ್ತು ಹೂಡಿಕೆಗಾಗಿ ಜನರನ್ನು ಆಕರ್ಷಿಸುವ ನಗರಗಳಲ್ಲಿ ಚುನಾವಣಾ ಪ್ರಕ್ರಿಯೆಯೂ ಒಳಗೊಳ್ಳುವಂತಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಅನ್ಬು ಕುಮಾರ್ ಅವರು ಈ ವಿಷಯವನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ. ಜನರಿಗೆ ಸಹಾಯವಾಗುವಂತೆ ಗೂಗಲ್ ಅನುವಾದ ಸೇರಿದಂತೆ ತಾಂತ್ರಿಕ ಉಪಕರಣಗಳನ್ನು ಬಳಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.



