ರಾಮನಗರ : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ವ್ಯಾಪಕ ಅಕ್ರಮ ಎಸಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಡಿಯೋ ಸಾಕ್ಷ್ಯಗಳು ಹಾಗೂ ದಾಖಲೆಗಳೊಂದಿಗೆ ಶೀಘ್ರದಲ್ಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಅಕ್ರಮಗಳ ಕುರಿತು ಮಾಹಿತಿ ಬರುತ್ತಿದ್ದು, ಕಾಂಗ್ರೆಸ್ ತನ್ನ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅನರ್ಹರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸುತ್ತಿದೆ ಎಂದು ಆರೋಪಿಸಿದರು. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಮೊದಲು ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಲಿ ಎಂದು ಕುಟುಕಿದರು.
ವೇದಿಕೆಯಲ್ಲಿ ಒಂದು ಮಾತನಾಡಿ, ಕಾರ್ಯರೂಪದಲ್ಲಿ ಮತ್ತೊಂದು ಮಾಡುವ ಸರ್ಕಾರದ ನಿಜಸ್ವರೂಪ ಶೀಘ್ರದಲ್ಲೇ ಬಯಲಾಗಲಿದೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಎಸ್ಐಆರ್ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡಲಿ. ಮುಖ್ಯಮಂತ್ರಿಯವರೇ ತಮ್ಮ ನಿವಾಸದಲ್ಲಿ ಅಧಿಕಾರಿಗಳನ್ನು ಕರೆಸಿ ಎಸ್ಐಆರ್ ಪ್ರಕ್ರಿಯೆ ನಡೆಸಿರುವುದು ಈ ಅಕ್ರಮದ ಆರಂಭ ಎಂದು ಕುಮಾರಸ್ವಾಮಿ ಆರೋಪಿಸಿದರು.
ಪಶ್ಚಿಮ ಬಂಗಾಳದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೇರೆ ರಾಜ್ಯಗಳ ಅಧಿಕಾರಿಗಳಿಂದ ಎಸ್ಐಆರ್ ಪ್ರಕ್ರಿಯೆ ನಡೆಸಲಾಗಿತ್ತು. ಕರ್ನಾಟಕದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊರರಾಜ್ಯದ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ರಾಮನಗರ ಜಿಲ್ಲೆಯೊಂದಿಗೆ ತಮ್ಮ ರಾಜಕೀಯ ನಂಟನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ರಾಮನಗರದಿಂದ ನಮ್ಮ ಕುಟುಂಬವನ್ನು ಓಡಿಸುತ್ತೇವೆ ಎನ್ನುವವರು ಎಷ್ಟೇ ಹೇಳಲಿ, ಈ ಜಿಲ್ಲೆ ನನಗೆ ರಾಜಕೀಯ ಜನ್ಮ ನೀಡಿದೆ. ಇಲ್ಲಿ ನನ್ನ ಭೂಮಿ, ಮತ ಹಾಗೂ ಜನರ ಆಶೀರ್ವಾದ ಇದೆ. ನಮ್ಮನ್ನು ಇಲ್ಲಿಂದ ಯಾರೂ ದೂರ ಮಾಡಲಾಗುವುದಿಲ್ಲ. ಕಾರ್ಯಕರ್ತರೊಂದಿಗೆ ಇಲ್ಲೇ ಕೆಲಸ ಆರಂಭಿಸಿದ್ದು, ಸತ್ಯವನ್ನು ಜನರ ಮುಂದೆ ತರುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.



