Saturday, July 4, 2026
Google search engine

Homeರಾಜ್ಯಮನೆ ಮನೆಗೆ ಹೋಗದ ಬಿಎಲ್‌ಒಗಳಿಗೆ ಬಿಗ್ ಶಾಕ್

ಮನೆ ಮನೆಗೆ ಹೋಗದ ಬಿಎಲ್‌ಒಗಳಿಗೆ ಬಿಗ್ ಶಾಕ್

ಕೋಲಾರದಲ್ಲಿ ಅಧಿಕಾರಿಗಳಿಗೆ ನೋಟಿಸ್, ಮೈಸೂರಿನಲ್ಲೂ ನಿಯಮ ಉಲ್ಲಂಘನೆ!

ಬೆಂಗಳೂರು : ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೀವ್ರ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಕೋಲಾರದಲ್ಲಿ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ (AC) ಸೇರಿದಂತೆ ಐವರು ಬಿಎಲ್‌ಒಗಳಿಗೆ (Booth Level Officers) ಜಿಲ್ಲಾಧಿಕಾರಿಗಳು ಖಡಕ್ ನೋಟಿಸ್ ಜಾರಿ ಮಾಡಿದ್ದಾರೆ. ಇತ್ತ ಮೈಸೂರಿನಲ್ಲೂ ಮನೆ ಮನೆಗೆ ತೆರಳದೆ ನಿಯಮ ಉಲ್ಲಂಘಿಸಿ ಸಾಮೂಹಿಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಲಾರ: ನಿಯಮ ಗಾಳಿಗೆ ತೂರಿ ಜನಾಕ್ರೋಶಕ್ಕೆ ತುತ್ತಾದ ಅಧಿಕಾರಿಗಳು

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮತಪಟ್ಟಿ ಪರಿಷ್ಕರಣೆಗಾಗಿ ಮನೆ ಮನೆಗೆ ಕಡ್ಡಾಯವಾಗಿ ಭೇಟಿ ನೀಡಲೇಬೇಕು ಎಂದು ಖಡಕ್ ಸೂಚನೆ ನೀಡಿದ್ದರು. ಆದರೆ ಕೋಲಾರದ ಮತಗಟ್ಟೆ ಸಂಖ್ಯೆ 185 ರಿಂದ 189 ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಬಿಎಲ್‌ಒಗಳು ಈ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಸಾರ್ವಜನಿಕರನ್ನು ಒಂದೆಡೆ ಗುಂಪು ಸೇರಿಸಿ ಪರಿಷ್ಕರಣೆ ನಡೆಸುತ್ತಿದ್ದ ದೃಶ್ಯಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನೋಟಿಸ್ ಜಾರಿಯಾಗಿರುವ ಅಧಿಕಾರಿಗಳ ಪಟ್ಟಿ

ಶ್ರೀನಿವಾಸ್ (ತಹಶೀಲ್ದಾರ್)

ಜಂಬಗಿ ರೇಣುಕಾಪ್ರಸಾದ್ ದಿಲೀಪ್ (ಉಪ ವಿಭಾಗಾಧಿಕಾರಿ - AC)

ಮುನಿರಾಜು (ಮೇಲ್ವಿಚಾರಕರು)

ಬಿಎಲ್‌ಒಗಳು: ಮೊಹಮ್ಮದ್ ಆರೀಫ್ ಪಾಷಾ, ನಾಜಿಯಾ ಖಾನುಂ, ರೇಷ್ಮಾ ತಲಾತ್, ಪರ್‌ವೀನ್ ಉನ್ನೀಸಾ ಮತ್ತು ಉಮದಾ ಬಾನು.

ಮೈಸೂರಿನಲ್ಲೂ ಎಸ್‌ಐಆರ್ ನಿಯಮ ಉಲ್ಲಂಘನೆ : ಸಾರ್ವಜನಿಕರ ತೀವ್ರ ಅಸಮಾಧಾನ

ಕೋಲಾರದ ಬೆನ್ನಲ್ಲೇ ಇದೇ ರೀತಿಯ ಗಂಭೀರ ಲೋಪ ಮೈಸೂರು ಜಿಲ್ಲೆಯಲ್ಲೂ ವರದಿಯಾಗಿದೆ. ಮೈಸೂರಿನ ಎನ್.ಆರ್. (N.R.) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವ ಬದಲು, ಸಾರ್ವಜನಿಕ ಸ್ಥಳ ಹಾಗೂ ಮತಗಟ್ಟೆ ಕೇಂದ್ರಗಳಲ್ಲಿ ಜನರನ್ನು ಗುಂಪುಗೂಡಿಸಿ ಸಾಮೂಹಿಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

"ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ ಅಧಿಕಾರಿಗಳೇ ನಮ್ಮ ಮನೆ ಬಾಗಿಲಿಗೆ ಬರಬೇಕು. ಅದನ್ನು ಬಿಟ್ಟು ನಮ್ಮನ್ನು ಗುಂಪು ಸೇರಿಸಿ ಪ್ರಕ್ರಿಯೆ ನಡೆಸುವುದು ಎಷ್ಟು ಸರಿ? ತಕ್ಷಣವೇ ಉನ್ನತ ಅಧಿಕಾರಿಗಳು ಹಸ್ತಕ್ಷೇಪ ಮಾಡಿ, ಮನೆ ಮನೆಗೆ ತೆರಳಿ ಪಾರದರ್ಶಕವಾಗಿ ಪರಿಷ್ಕರಣೆ ನಡೆಸುವಂತೆ ಬಿಎಲ್‌ಒಗಳಿಗೆ ಆದೇಶಿಸಬೇಕು."
— ಸ್ಥಳೀಯ ನಿವಾಸಿಗಳು, ಮೈಸೂರು

ಮತಪಟ್ಟಿ ಪರಿಷ್ಕರಣೆಯಂತಹ ಜವಾಬ್ದಾರಿಯುತ ಕೆಲಸದಲ್ಲಿ ಅಧಿಕಾರಿಗಳ ಈ ರೀತಿಯ ಬೇಜವಾಬ್ದಾರಿತನ ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಮೈಸೂರು ಜಿಲ್ಲಾಡಳಿತವೂ ಕೋಲಾರದ ಮಾದರಿಯಲ್ಲೇ ಕಠಿಣ ಕ್ರಮ ಕೈಗೊಳ್ಳಲಿದೆಯೇ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.(ಏಜೆನ್ಸಿಸ್)

RELATED ARTICLES
- Advertisment -
Google search engine

Most Popular