ಮೈಸೂರು : ನಗರದಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಅಳವಡಿಸಲಾದ ಹೊಸ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಗೊಂದಲಕಾರಿಯಾಗಿದ್ದು, ಸಾರ್ವಜನಿಕ ಹಣದ ದುರುಪಯೋಗವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಳವಳ ವ್ಯಕ್ತಪಡಿಸಿದ್ದಾರೆ.
ಸುಮಾರು ಎಂಟು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಜಾರಿಗೊಂಡ ಈ ಯೋಜನೆಯು ವೈಜ್ಞಾನಿಕ ಹಾಗೂ ತಾಂತ್ರಿಕ ದೃಷ್ಟಿಯಿಂದ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರಲ್ಲದೆ, ಯೋಜನೆ ರೂಪಿಸುವ ಮೊದಲು ನಡೆಸಬೇಕಾದ ವಾಹನ ಸಂಚಾರ ಗಣತಿ, ಎಂಜಿನಿಯರಿಂಗ್ ಸಮೀಕ್ಷೆ ಹಾಗೂ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗಳಂತಹ ಮೂಲಭೂತ ಹಂತಗಳನ್ನು ಕಡೆಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ನಗರದ ಹಲವೆಡೆ ಅಳವಡಿಸಲಾದ ಸಿಗ್ನಲ್‌ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವುದು ಯೋಜನೆಯ ಕಳಪೆ ಅನುಷ್ಠಾನಕ್ಕೆ ಸಾಕ್ಷಿಯಾಗಿದ್ದು, ಇದರಿಂದ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.
ಈ ಹಿನ್ನೆಲೆ ಸಂಬಂಧಪಟ್ಟ ನಗರಾಡಳಿತ ಅಧಿಕಾರಿಗಳು ತಕ್ಷಣ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಹಾಗೂ ಲೋಪಗಳಿಗೆ ಹೊಣೆಗಾರರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯದುವೀರ್ ಒಡೆಯರ್ ಆಗ್ರಹಿಸಿದ್ದಾರೆ.



