ಬೆಂಗಳೂರು : ದೊಡ್ಡಬಳ್ಳಾಪುರ ಸಮೀಪದ ರಾಜಘಟ್ಟದಲ್ಲಿ ಪತ್ತೆಯಾಗಿರುವ ಪ್ರಾಚೀನ ಬೌದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅವಶೇಷಗಳನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಇನ್ನೂ ಈ ಕುರಿತು ರಾಜಘಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೌದ್ಧ ಸಮುದಾಯದ ಮನವಿಗೆ ಸ್ಪಂದಿಸಿ, ಈ ಐತಿಹಾಸಿಕ ತಾಣದ ಕುರಿತು ಸಮಗ್ರ ಅಧ್ಯಯನ ನಡೆಸಲು ವಿಶೇಷ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
4ನೇ ಮತ್ತು 5ನೇ ಶತಮಾನಕ್ಕೆ ಸೇರಿದ ಮಹಾಯಾನ ಬೌದ್ಧ ಮಠದ ಅವಶೇಷಗಳು, ಚೈತ್ಯಾಲಯ (ಪ್ರಾರ್ಥನಾ ಮಂದಿರ) ಹಾಗೂ ವಿಹಾರ (ಮಠ) ಸೇರಿದಂತೆ ಹಲವು ಅಮೂಲ್ಯ ಪುರಾತತ್ವ ಅವಶೇಷಗಳು ಬೆಳಕಿಗೆ ಬಂದಿರುವುದು ರಾಜ್ಯದ ಹೆಮ್ಮೆಯ ವಿಷಯ.
ರಾಜಘಟ್ಟದಲ್ಲಿ ಸಾವಿರಾರು ವರ್ಷಗಳ ಹಿಂದಿನ ಬೌದ್ಧ ಸಂಸ್ಕೃತಿಯ ಅಮೂಲ್ಯ ಕುರುಹುಗಳು ಪತ್ತೆಯಾಗಿದ್ದು, ಈ ತಾಣದ ಬಗ್ಗೆ ಸಮಗ್ರ ಅಧ್ಯಯನ ನಡೆಸುವುದು ಅಗತ್ಯ. ಇದಕ್ಕಾಗಿ ಅಧಿಕಾರಿಗಳ ತಂಡವನ್ನು ರಚಿಸಿ, ಇಲ್ಲಿನ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಕೆಲಸವನ್ನು ಸರ್ಕಾರ ಕೈಗೊಳ್ಳಲಿದೆ. ರಾಜಘಟ್ಟದಲ್ಲಿ ಪತ್ತೆಯಾಗಿರುವ ಮಹಾಯಾನ ಬೌದ್ಧ ಮಠದ ಅವಶೇಷಗಳು ಕರ್ನಾಟಕದ ಪುರಾತತ್ವ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿದ್ದು, ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಇದೇ ವೇಳೆ ಬೌದ್ಧ ಸಮುದಾಯದ ಪ್ರತಿನಿಧಿಗಳು ರಾಜಘಟ್ಟದ ಪುರಾತತ್ವ ತಾಣವನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಯನ ಸಮಿತಿ ರಚಿಸಿ ತಜ್ಞರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದರು.



