ನವದೆಹಲಿ : ಮೇ 3, 2026 ರಂದು ನಡೆದಿದ್ದ NEET UG ಪರೀಕ್ಷೆಯು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದರಿಂದ, ಪರೀಕ್ಷೆಗೆ ಪಾವತಿಸಿದ್ದ ಶುಲ್ಕವನ್ನು ಹಿಂದಿರುಗಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಬ್ಯಾಂಕ್ ಖಾತೆಯ ವಿವರಗಳನ್ನು ದೃಢೀಕರಿಸಲು ಅಥವಾ ನವೀಕರಿಸಲು ನೀಡಲಾಗಿದ್ದ ಗಡುವನ್ನು NTA ಇದೀಗ ಜುಲೈ 7, 2026 ರವರೆಗೆ ವಿಸ್ತರಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ NTA, ಈಗಾಗಲೇ ಬ್ಯಾಂಕ್ ವಿವರಗಳನ್ನು ಸರಿಯಾಗಿ ನಮೂದಿಸಿ ದೃಢೀಕರಿಸಿದ ಅಭ್ಯರ್ಥಿಗಳಿಗೆ ಶುಲ್ಕ ಮರುಪಾವತಿ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದೆ. ಆದಾಗ್ಯೂ ಇದುವರೆಗೆ ಸುಮಾರು 8 ಲಕ್ಷದ 29 ಸಾವಿರದ 510 ಅಭ್ಯರ್ಥಿಗಳು ಮಾತ್ರ ತಮ್ಮ ಬ್ಯಾಂಕ್ ವಿವರಗಳನ್ನು ಸರಿಪಡಿಸಿದ್ದಾರೆ ಅಥವಾ ನವೀಕರಿಸಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಅಭ್ಯರ್ಥಿಗಳು ಗಮನಿಸಬೇಕಾದ ಅಂಶಗಳು ಇಲ್ಲಿವೆ
ಕೊನೆಯ ದಿನಾಂಕ : ಜುಲೈ 7, 2026 ರ ರಾತ್ರಿ 11:50 ರವರೆಗೆ.
ಅಪ್ ಡೇಟ್ ಮಾಡುವುದು ಹೇಗೆ?
ಅಭ್ಯರ್ಥಿಗಳು NTA ಯ ಅಧಿಕೃತ ವೆಬ್‌ಸೈಟ್ neet.nta.nic.in ಗೆ ಭೇಟಿ ನೀಡಿ, ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಲಾಗಿನ್ ಆಗಬೇಕು.
ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ಅತ್ಯಂತ ಎಚ್ಚರಿಕೆಯಿಂದ ನಮೂದಿಸಬೇಕು. ತಪ್ಪು ಮಾಹಿತಿ ನೀಡಿದರೆ ಮರುಪಾವತಿಯಲ್ಲಿ ವಿಳಂಬವಾಗಬಹುದು ಅಥವಾ ಹಣ ಬೇರೆ ಖಾತೆಗೆ ಜಮೆಯಾಗುವ ಅಪಾಯವಿರುತ್ತದೆ. ದೃಢೀಕರಣಕ್ಕಾಗಿ ಪಾಸ್‌ಬುಕ್‌ನ ಮೊದಲ ಪುಟ ಅಥವಾ ಕ್ಯಾನ್ಸಲ್ ಮಾಡಿದ ಚೆಕ್ ಅನ್ನು ಅಪ್‌ಲೋಡ್ ಮಾಡಲು ಅವಕಾಶವಿದೆ. ಅರ್ಹ ಅಭ್ಯರ್ಥಿಗಳು ಈ ಕೊನೆಯ ಅವಕಾಶವನ್ನು ಬಳಸಿಕೊಂಡು, ತಕ್ಷಣವೇ ತಮ್ಮ ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಲು NTA ಸೂಚಿಸಿದೆ.



