ತುಮಕೂರು : ಕರ್ತವ್ಯ ನಿರ್ವಹಣೆಗೆ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಗ್ರಾಮ ಲೆಕ್ಕಾಧಿಕಾರಿ ಭುವನಾ ಅವರ ಕುಟುಂಬಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡುವುದಾಗಿ ಕಂದಾಯ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.
ಮೃತ ಭುವನಾ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಡಿಸಿಎಂ ಡಾ.ಜಿ.ಪರಮೇಶ್ವರ್, ಕಂದಾಯ ನೌಕರರ ಸಂಘವು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಭುವನಾ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ವಿಮೆ ಹಣವನ್ನು ಮುಂದಿನ 15 ದಿನಗಳಲ್ಲಿ ಮಂಜೂರು ಮಾಡಿಸಿಕೊಡಲಾಗುವುದು. ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರದ ವತಿಯಿಂದ ಉದ್ಯೋಗ ಕಲ್ಪಿಸುವ ಬಗ್ಗೆ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುವುದು. ಭುವನಾ ಅವರು ಕರ್ತವ್ಯದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿರುವುದರಿಂದ, ಚುನಾವಣಾ ಆಯೋಗದಿಂದ ವಿಶೇಷ ಪರಿಹಾರವಾಗಿ 30 ಲಕ್ಷ ರೂ. ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಘಟನೆ ಹಿನ್ನೆಲೆ
ತುಮಕೂರು ತಾಲೂಕಿನ ಹುಲ್ಲೇನಹಳ್ಳಿಯ ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಟಿ. ಬೇಗೂರು ಮೂಲದ ಭುವನಾ, ಶನಿವಾರ ಬೆಳಗ್ಗೆ ಎಸ್ ಐಆರ್ (SIR) ಪ್ರಕ್ರಿಯೆಯ ಸೂಪರ್‌ವೈಸರ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ತಮ್ಮ ದ್ವಿಚಕ್ರ ವಾಹನದಲ್ಲಿ ಗೂಳೂರಿನ ನಾಡಕಚೇರಿಗೆ ತೆರಳುತ್ತಿದ್ದಾಗ, ಕುಣಿಗಲ್ ರಸ್ತೆಯ ಗೂಳೂರು ಬಳಿ ಎದುರಿನಿಂದ ಬಂದ ಲಾರಿಯೊಂದು ಅವರ ಬೈಕ್‌ಗೆ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭುವನಾ ಅವರನ್ನು ತಕ್ಷಣ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಲ್ಮೆಟ್ ಧರಿಸಿದ್ದರೂ ಸಹ, ಡಿಕ್ಕಿಯ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಸಂಜೆ ಮೃತಪಟ್ಟಿದ್ದರು.
ಪ್ರತಿಭಟನೆ ಹಿಂಪಡೆದ ನೌಕರರು
ಭುವನಾ ಅವರ ಅಕಾಲಿಕ ನಿಧನಕ್ಕೆ ನ್ಯಾಯ ಮತ್ತು ಸೂಕ್ತ ಪರಿಹಾರ ಕೋರಿ ಕಂದಾಯ ನೌಕರರ ಸಂಘವು ಪ್ರತಿಭಟನೆ ನಡೆಸುತ್ತಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಂ ಡಾ.ಜಿ. ಪರಮೇಶ್ವರ್, “ನನ್ನ ಆರೋಗ್ಯದಲ್ಲಿನ ಸಮಸ್ಯೆಯಿಂದಾಗಿ ಕೂಡಲೇ ಸ್ಥಳಕ್ಕೆ ಬರಲು ಸಾಧ್ಯವಾಗಲಿಲ್ಲ, ಕ್ಷಮಿಸಿ. ನಿಮ್ಮನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ” ಎಂದು ನೌಕರರಿಗೆ ಭರವಸೆ ನೀಡಿದರು. ಸರ್ಕಾರದ ಭರವಸೆಯ ಮೇರೆಗೆ ನೌಕರರ ಸಂಘವು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಂಡಿದೆ. (ಏಜೆನ್ಸಿಸ್)



