ಕೆ.ಆರ್.ನಗರ: ಸರ್ಕಾರಕ್ಕೆ ಪರ್ಯಾಯವಾಗಿ ಮಠಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮೂಲಕ ದೊಡ್ಡ ಮಟ್ಟದ ಕೊಡುಗೆ ನೀಡಿವೆ ಇದರಿಂದ ರಾಜ್ಯದ ಜನತೆಗೆ ಸಾಕಷ್ಟು ಅನುಕೂಲವಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಬೋರೇಕಲ್ಲಹಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಬಸವಮಠ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದ ಇತರ ಮಠಗಳ ರೀತಿಯಲ್ಲಿ ಈ ಮಠಾಧೀಶರು ಶಿಕ್ಷಣ ಸಂಸ್ಥೆ ಆರಂಭಿಸಿ ಈ ಭಾಗದ ಗ್ರಾಮಗಳ ಜನತೆಗೆ ಅನುಕೂಲ ಮಾಡಬೇಕು ಎಂದರು.
ನಾರಾಯಣಪುರ, ಹೊಸೂರುಕಲ್ಲಹಳ್ಳಿ, ಸೌತನಹಳ್ಳಿ, ಕಾಮೇನಹಳ್ಳಿ ಮತ್ತು ಬೋರೇಕಲ್ಲಹಳ್ಳಿ ಗ್ರಾಮಸ್ಥರ ಸೂಚನೆಯಂತೆ ಮಠದ ನಿರ್ವಹಣೆಗಾಗಿ ವೈಯುಕ್ತಿಕವಾಗಿ ೫ಲಕ್ಷ ರೂ. ನೀಡುವುದರ ಜತೆಗೆ ಮಠದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲು ಶಾಸಕರ ನಿಧಿಯಿಂದ ೨೦ಲಕ್ಷ ರೂ. ಅನುದಾನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೆ.ಆರ್.ನಗರ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಭವನದ ನಿವೇಶನದ ದಾಖಲಾತಿಗಳನ್ನು ಸರ್ಕಾರದ ಮಟ್ಟದಲ್ಲಿ ಸರಿಪಡಿಸಲಾಗುತ್ತಿದ್ದು ಮುಂದಿನ ೨ ರಿಂದ ೩ ತಿಂಗಳೊಳಗೆ ಮುಂದುವರೆದ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಅದಕ್ಕಾಗಿ ೧ ಕೋಟಿ ರೂ. ಅನುದಾನವನ್ನು ಮೀಸಲಾಗಿರಿಸಲಾಗಿದೆ ಎಂದು ತಿಳಿಸಿದರು.
ಬೋರೇಕಲ್ಲಹಳ್ಳಿ ಬಸವ ಮಠದ ಶ್ರೀ ದೇವರಾಜ ಸ್ವಾಮೀಜಿಗಳು ಈ ಭಾಗದ ಜನರನ್ನು ಸನ್ಮಾಗದಲ್ಲಿ ಕರೆದೊಯ್ಯುವ ಕೆಲಸ ಮಾಡುವುದರ ಜತೆಗೆ ಮಠದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಮನವಿ ಮಾಡಿದ ಶಾಸಕರು ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ವೀರಶೈವ ಮಹಾಸಭಾದ ಅಧ್ಯಕ್ಷ ಸಿ.ಪಿ.ರಮೇಶ್ ಮಾತನಾಡಿ ಮಠಕ್ಕೆ ವೈಯುಕ್ತಿವಾಗಿ ಸ್ಕೂಟರ್‌ನ್ನು ಕೊಡುಗೆಯಾಗಿ ನೀಡುವುದಾಗಿ ಹೇಳಿದರು. ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ಎ.ಎಸ್.ಚನ್ನಬಸಪ್ಪ, ಸಾಲಿಗ್ರಾಮ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಕೆಡಗ ನಟರಾಜು ಮಾತನಾಡಿದರು.
ಉಕ್ಕಿನ ಕಂತೆ ಮಠದ ಶ್ರೀಸಾಂಭಸದಾಶಿವಸ್ವಾಮೀಜಿ, ಗುರುಲಿಂಗ ಜಂಗಮ ದೇವರ ಮಠದ ಶ್ರೀನಟರಾಜಸ್ವಾಮೀಜಿ, ಅರಕೆರೆ ವಿರಕ್ತ ಮಠದ ಶ್ರೀಸಿದ್ದೇಶ್ವರ ಸ್ವಾಮೀಜಿ, ಲಾಳನಹಳ್ಳಿ ಮಠದ ಜಯದೇವಿತಾಯಿ,ಕಲ್ಯಾಣಪುರ ಮಠದ ಚಿನ್ಮಯಿ ತಾಯಿ, ಮಾರಗೌಡನಹಳ್ಳಿ ಮಠದ ಶಂಭುಲಿಂಗಸ್ವಾಮೀಜಿ, ಮಠದ ಆಡಳಿತ ಮಂಡಳಿ ಅಧ್ಯಕ್ಷ ರುದ್ರಪ್ಪ, ಮುಖಂಡರಾದ ವೈ.ಎನ್.ಚಂದ್ರಶೇಖರ್, ಎಲ್.ಪಿ.ರವಿಕುಮಾರ್, ಸಿ.ಈ.ತ್ರಿವೇಣಿ ಹಾಜರಿದ್ದರು



