ಬೆಳಗಾವಿ: ಹಾವೇರಿ ಜಿಲ್ಲೆಯಲ್ಲಿ ನಡೆಸಿದ ಮೋಡ ಬಿತ್ತನೆ ಪ್ರಯೋಗದ ಬಳಿಕ ಉತ್ತಮ ಮಳೆಯಾಗಿರುವ ಬಗ್ಗೆ ಜನರು ಹೇಳುತ್ತಿದ್ದಾರೆ. ರಾಜ್ಯದ ಇತರೆ ಭಾಗಗಳಲ್ಲೂ ಮೋಡ ಬಿತ್ತನೆ ಕಾರ್ಯಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಸಂಪುಟ ವಿಸ್ತರಣೆಯ ಪ್ರಶ್ನೆಗೆ ಉತ್ತರಿಸಿದ ಅವರು, ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಬೇಕೆಂದು ನಾವು ಈಗಾಗಲೇ ಹೇಳಿದ್ದೇವೆ. ಶೀಘ್ರದಲ್ಲೇ ಆಗುವ ನಿರೀಕ್ಷೆಯಿದೆ. ಸ್ವಲ್ಪ ಕಾಯೋಣ ಎಂದರು.
ಬೆಳಗಾವಿಯಲ್ಲಿ ನಡೆಯಲಿರುವ ಆರ್ಎಸ್ಎಸ್ ಬೈಠಕ್ ಪ್ರಶ್ನೆ ಕುರಿತು ಮಾತನಾಡಿದ ಸಚಿವರು, “ಅವರು ಕಾರ್ಯಕ್ರಮ ನಡೆಸಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಅಗತ್ಯವಿರುವ ಎಲ್ಲಾ ಭದ್ರತೆ ಹಾಗೂ ಮೂಲಸೌಕರ್ಯ ವ್ಯವಸ್ಥೆಯನ್ನು ಪೊಲೀಸರು ಮತ್ತು ಜಿಲ್ಲಾಡಳಿತ ಕಲ್ಪಿಸಿದೆ. ರಾಜ್ಯ ಸರ್ಕಾರದಿಂದಲೂ ಬೇಕಾದ ಸಹಕಾರ ನೀಡಲಾಗಿದೆ. ಕಾರ್ಯಕ್ರಮವನ್ನು ಹೇಗೆ ನಡೆಸಬೇಕು ಎಂಬುದು ಅವರ ನಿರ್ಧಾರ ಎಂದರು.
ಆರ್ಎಸ್ಎಸ್ ಸಭೆಯಲ್ಲಿ ರಾಜಕೀಯ ಅಜೆಂಡಾ ಇರಬಹುದೇ ಎಂಬ ಪ್ರಶ್ನೆಗೆ, “ಅವರು ಯಾವಾಗಲೂ ರಾಜಕೀಯದಿಂದ ದೂರ ಇದ್ದೇವೆ ಎಂದು ಹೇಳುತ್ತಾರೆ. ನಾವೂ ಅದನ್ನೇ ಕೇಳಿದ್ದೇವೆ,” ಎಂದು ಉತ್ತರಿಸಿದರು.
ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡುವ ಉದ್ದೇಶದಿಂದಲೇ ಕರ್ನಾಟಕದಲ್ಲಿ ಆರ್ಎಸ್ಎಸ್ ಬೈಠಕ್ ಆಯೋಜಿಸಲಾಗಿದೆ ಎಂಬ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, “ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಪ್ರಿಯಾಂಕ್ ಖರ್ಗೆ ಅವರಿಗೆ ಸಂಬಂಧಿಸಿದ ವಿಚಾರ,” ಎಂದರು.
ಆರ್ಎಸ್ಎಸ್ ಪಥಸಂಚಲನಕ್ಕೆ ಪೊಲೀಸ್ ಅನುಮತಿ ಕಡ್ಡಾಯ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಕೇಳಿದಾಗ, ಅದು ಅವರ ಇಲಾಖೆಯ ವ್ಯಾಪ್ತಿಯ ವಿಷಯ. ಯಾವ ರೀತಿಯಲ್ಲಿ ಅನುಮತಿ ಪಡೆಯಬೇಕು, ಯಾವ ನಿಯಮ ಪಾಲಿಸಬೇಕು ಎಂಬುದನ್ನು ಗೃಹ ಇಲಾಖೆ ಹಾಗೂ ಗೃಹ ಸಚಿವರೇ ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.



