ನವದೆಹಲಿ: ಭಾರತೀಯ ರೈಲ್ವೆಯ ಫಸ್ಟ್ ಎಸಿ ಕೋಚ್‌ವೊಂದನ್ನು ‘ಹನಿಮೂನ್ ಸೂಟ್’ ಮಾದರಿಯಲ್ಲಿ ಅಲಂಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. 11002 ನಾಂದೇಡ್–ಗ್ರಾಮ್ ಎಕ್ಸ್‌ಪ್ರೆಸ್ ರೈಲಿನ ಫಸ್ಟ್ ಎಸಿ ಕ್ಯಾಬಿನ್ ಅನ್ನು ಬಲೂನ್‌ಗಳು, ಹೂವಿನ ಅಲಂಕಾರ, ಸಾವಿರಾರು ಗುಲಾಬಿ ಹೂವಿನ ದಳಗಳು ಹಾಗೂ ಗೋಡೆಯ ಮೇಲೆ “I Love You” ಎಂಬ ಸಂದೇಶದೊಂದಿಗೆ ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು.
ಮಹಾರಾಷ್ಟ್ರದ ‘ರಾಹತ್ ರೂಮ್ ಡೆಕೊರೇಶನ್’ ಸಂಸ್ಥೆಯು ಜಲ್ನಾ ಮೂಲದ ದಂಪತಿಗಾಗಿ ಈ ಅಲಂಕಾರ ಮಾಡಿತ್ತು ಎಂದು ತಿಳಿದುಬಂದಿದೆ. ದಂಪತಿ ಕಾರಿನಲ್ಲಿ ಜಲ್ನಾ ನಿಲ್ದಾಣಕ್ಕೆ ತೆರಳುವ ವೇಳೆಯಲ್ಲೇ ತಂಡವು ರೈಲಿನ ಕೋಚ್‌ಗೆ ಅಲಂಕಾರ ಮಾಡಿದ್ದು, ನಂತರ ದಂಪತಿ ಅಲ್ಲಿಂದ ರೈಲು ಹತ್ತಿದ್ದರು.
ಆದರೆ ಈ ಬೆಳವಣಿಗೆಯನ್ನು ಭಾರತೀಯ ರೈಲ್ವೆ ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಅಧಿಕೃತ ಅನುಮತಿಯಿಲ್ಲದೆ ಕೋಚ್‌ಗೆ ಪ್ರವೇಶಿಸಿ ಅಲಂಕಾರ ಮಾಡಿರುವುದು ಭದ್ರತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅನುಮತಿಯಿಲ್ಲದೆ ಕೋಚ್ ಪ್ರವೇಶ, ಟಿಕೆಟ್ ಇಲ್ಲದೆ ಪ್ರಯಾಣ ಹಾಗೂ ರೈಲ್ವೆ ಆವರಣಕ್ಕೆ ಅಕ್ರಮ ಪ್ರವೇಶ ಸೇರಿದಂತೆ ಹಲವು ಆರೋಪಗಳನ್ನು ದಾಖಲಿಸಲಾಗಿದೆ.
ಘಟನೆ ವೇಳೆ ಕರ್ತವ್ಯದಲ್ಲಿದ್ದ ಮುಖ್ಯ ಟಿಕೆಟ್ ಪರಿಶೀಲಕ ಗಿರೀಶ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದ್ದು, ಭದ್ರತಾ ಲೋಪದ ಕುರಿತು ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು ದಂಪತಿಯ ವಿಶೇಷ ಕ್ಷಣವನ್ನು ವಿಭಿನ್ನವಾಗಿ ಆಚರಿಸಿರುವುದನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಇಂತಹ ಅಲಂಕಾರಗಳು ಅಗ್ನಿ ಸುರಕ್ಷತಾ ನಿಯಮಗಳಿಗೆ ವಿರುದ್ಧವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನೆಟ್ಟಿಗರು ಈ ರೈಲಿಗೆ ‘ಸುಹಾಗ್ರಾತ್ ಎಕ್ಸ್‌ಪ್ರೆಸ್’ ಮತ್ತು ‘ಹನಿಮೂನ್ ಆನ್ ವೀಲ್ಸ್’ ಎಂಬ ಹೆಸರಿಟ್ಟು ಹಾಸ್ಯಮಯ ಪೋಸ್ಟ್‌ಗಳು ಹಾಗೂ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.



