ಬೆಂಗಳೂರು: ಬಹುಚರ್ಚಿತ ಬಿಟ್ಕಾಯಿನ್ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಡಿವೈಎಸ್ಪಿ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಆರೋಪಪಟ್ಟಿಯಿಂದ ಕೈಬಿಡಲಾಗಿದೆ. ಕರ್ನಾಟಕ ಗೃಹ ಇಲಾಖೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಗತ್ಯವಾದ ಪ್ರಾಸಿಕ್ಯೂಷನ್ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಎಸ್ಐಟಿ ಈ ಕ್ರಮ ಕೈಗೊಂಡಿದೆ. ಆದರೆ, ಸೈಬರ್ ತಜ್ಞ ಕೆ.ಎಸ್. ಸಂತೋಷ್ ಕುಮಾರ್ ವಿರುದ್ಧ ಮಾತ್ರ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಅವರನ್ನು ಅಕ್ರಮವಾಗಿ ಬಂಧಿಸಿ, ಅವರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್ಕಾಯಿನ್ ವರ್ಗಾಯಿಸಲು ಒತ್ತಾಯಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿತ್ತು.
ಪ್ರಕರಣದಲ್ಲಿ ಡಿವೈಎಸ್ಪಿ ಶ್ರೀಧರ್ ಪೂಜಾರಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಚಂದ್ರಾಧರ್, ಲಕ್ಷ್ಮಿಕಾಂತಯ್ಯ ಮತ್ತು ಡಿ.ಎಂ. ಪ್ರಶಾಂತ್ ಬಾಬು ಅವರ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. ಗೃಹ ಇಲಾಖೆ ಅನುಮತಿ ನೀಡದ ಕಾರಣ ಎಸ್ಐಟಿ ನ್ಯಾಯಾಲಯಕ್ಕೆ ಬಿ-ವರದಿ ಸಲ್ಲಿಸಿದೆ.
ಆದರೆ, ಸೈಬರ್ ತಜ್ಞ ಕೆ.ಎಸ್. ಸಂತೋಷ್ ಕುಮಾರ್ ವಿರುದ್ಧ 1ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಸಾಕ್ಷಿಗಳ ಹೇಳಿಕೆಗಳು, ತಾಂತ್ರಿಕ ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಂತೋಷ್ ಕುಮಾರ್ ವಿರುದ್ಧ ಆರೋಪಗಳು ದೃಢಪಟ್ಟಿವೆ ಎಂದು ಎಸ್ಐಟಿ ತಿಳಿಸಿದೆ.
ಚಾರ್ಜ್ಶೀಟ್ ಪ್ರಕಾರ, ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇಲ್ವಾಲ್ ಅವರ ಕ್ರಿಪ್ಟೋಕರೆನ್ಸಿ ವ್ಯಾಲೆಟ್ಗಳನ್ನು ದುರುಪಯೋಗಪಡಿಸಿಕೊಂಡು, ಹಲವಾರು ಕೋಟಿ ರೂಪಾಯಿ ಮೌಲ್ಯದ ಬಿಟ್ಕಾಯಿನ್ಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ.
ನಾಲ್ವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅನುಮತಿ ಕೋರಿ ಎಸ್ಐಟಿ ಮೂರು ಪ್ರತ್ಯೇಕ ಪ್ರಸ್ತಾವಗಳನ್ನು ಗೃಹ ಇಲಾಖೆಗೆ ಸಲ್ಲಿಸಿತ್ತು. ಆದರೆ, ಎಲ್ಲಾ ಮನವಿಗಳೂ ತಿರಸ್ಕೃತವಾಗಿದ್ದರಿಂದ ಸಂತೋಷ್ ಕುಮಾರ್ ವಿರುದ್ಧ ಮಾತ್ರ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಪ್ರಕರಣದ ಮುಂದಿನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ.



