ಬೆಂಗಳೂರು : ಕಾವೇರಿ–ಕೃಷ್ಣಾ–ಗೋದಾವರಿ ನದಿ ಜೋಡಣೆ ಯೋಜನೆ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದ ನೀರಿನ ಹಕ್ಕು ಖಚಿತಪಡಿಸಿಕೊಳ್ಳದೇ ಯೋಜನೆಗೆ ಒಪ್ಪಿಗೆ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ಜೋಡಣೆ ಯೋಜನೆಗೆ ನನಗೆ ಯಾವುದೇ ವಿರೋಧವಿಲ್ಲ. ಆದರೆ ಕರ್ನಾಟಕಕ್ಕೆ ಎಷ್ಟು ನೀರು ದೊರೆಯಲಿದೆ ಎಂಬುದು ಸ್ಪಷ್ಟವಾಗದೆ ಒಪ್ಪಿಗೆ ನೀಡುವುದು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‌ಗಳು ಹಾಗೂ ರಾಜ್ಯದ ಪರ ವಕಾಲತ್ತು ನಡೆಸುತ್ತಿರುವ ತಜ್ಞರಿಂದ ಮಾಹಿತಿ ಪಡೆದು ಮಾತನಾಡಬೇಕು ಎಂದು ಸಲಹೆ ನೀಡಿದರು.
ಇನ್ನೂ ಬರಗಾಲ ಪರಿಶೀಲನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಮುಖ್ಯಮಂತ್ರಿ, ನೀರಿನಂತಹ ಮಹತ್ವದ ವಿಷಯದಲ್ಲಿ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ ಎದುರಿಸುತ್ತಿರುವ ಜಲ ವಿವಾದಗಳ ಬಗ್ಗೆ ಅವರಿಗೆ ಸಮಗ್ರ ಅರಿವು ಇರಬೇಕಿತ್ತು ಎಂದು ಕುಮಾರಸ್ವಾಮಿ ಟೀಕಿಸಿದರು.
ಮುಖ್ಯಮಂತ್ರಿ ಬೆಳಗಾವಿಯಲ್ಲಿ ನದಿ ಜೋಡಣೆ ಯೋಜನೆಗೆ ಕರ್ನಾಟಕ ಒಪ್ಪಿಗೆ ನೀಡಿದ್ದು, ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆಯಾಗಿ ಜಾರಿಗೊಳಿಸಲಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 2022ರ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ವರದಿಯಲ್ಲಿ ಒಟ್ಟು 247 ಟಿಎಂಸಿ ನೀರಿನ ಲಭ್ಯತೆ ಅಂದಾಜಿಸಿದ್ದರೂ ಕರ್ನಾಟಕಕ್ಕೆ ಯಾವುದೇ ಹಂಚಿಕೆ ಮಾಡಿರಲಿಲ್ಲ ಎಂದು ಹೇಳಿದರು.
ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಮನವಿಯ ಬಳಿಕ 2023–24ರ ವರದಿಯಲ್ಲಿ ಕರ್ನಾಟಕಕ್ಕೆ 15 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಆದರೆ ಆ ನೀರನ್ನು ಮಲಪ್ರಭಾ ಕಮಾಂಡ್ ಪ್ರದೇಶದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸುವ ಷರತ್ತು ವಿಧಿಸಲಾಗಿದ್ದು, ನೀರಾವರಿಗೆ ಅವಕಾಶ ಇಲ್ಲ. ಇದರಿಂದ ರಾಜ್ಯಕ್ಕೆ ವಾಸ್ತವವಾಗಿ ಅತಿ ಕಡಿಮೆ ಪ್ರಮಾಣದ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.
ನೀರಿನ ಹಂಚಿಕೆ ರಿಯಲ್ ಎಸ್ಟೇಟ್ ವ್ಯವಹಾರವಲ್ಲ. ಕರ್ನಾಟಕಕ್ಕೆ ನ್ಯಾಯಯುತ ಪಾಲು ಸಿಗುವಂತೆ ಅಗತ್ಯವಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗಬೇಕು. ಯೋಜನೆಗೆ ವಿರೋಧವಿಲ್ಲ, ಆದರೆ ರಾಜ್ಯದ ಹಕ್ಕುಗಳಿಗೆ ಧಕ್ಕೆಯಾಗಬಾರದು ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ತುಂಗಭದ್ರಾ ಜಲಾಶಯದ ನೂತನ ಕ್ರೆಸ್ಟ್ ಗೇಟ್ ಉದ್ಘಾಟನೆ ವೇಳೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯ ವಿವರಗಳನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಕುಮಾರಸ್ವಾಮಿ, ನವಿಲೆ ಜಲಾಶಯ ಯೋಜನೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಒಪ್ಪಿಗೆ ನೀಡಿವೆಯೇ ಮತ್ತು ಯೋಜನೆಗೆ ಹಣವನ್ನು ಯಾರು ಭರಿಸಲಿದ್ದಾರೆ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.



