ನ್ಯೂಜಿಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಹೊಸ ಹಂತಕ್ಕೆ ಕೊಂಡೊಯ್ಯುವ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶನಿವಾರ ಉಭಯ ದೇಶಗಳು ತಮ್ಮ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆ (Strategic Partnership) ಮಟ್ಟಕ್ಕೆ ಏರಿಸಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ನಡುವಿನ ಉನ್ನತ ಮಟ್ಟದ ಮಾತುಕತೆಯ ಬಳಿಕ ಈ ಘೋಷಣೆ ಮಾಡಲಾಗಿದೆ.
ಮೋದಿ ಅವರ ಮೂರು ರಾಷ್ಟ್ರಗಳ ವಿದೇಶ ಪ್ರವಾಸದ ಕೊನೆಯ ಹಂತವಾಗಿ ಆಕ್ಲೆಂಡ್ನಲ್ಲಿ ನಡೆದ ಸಭೆಯಲ್ಲಿ, 2030ರ ವೇಳೆಗೆ ಉಭಯ ದೇಶಗಳ ನಡುವಿನ ವಾರ್ಷಿಕ ಸರಕು ಮತ್ತು ಸೇವೆಗಳ ವ್ಯಾಪಾರವನ್ನು 35,000 ಕೋಟಿ ರೂಪಾಯಿ (7 ಬಿಲಿಯನ್ ನ್ಯೂಜಿಲೆಂಡ್ ಡಾಲರ್) ಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ನಿಗದಿಪಡಿಸಲಾಗಿದೆ. ಇತ್ತೀಚೆಗೆ ಸಹಿ ಮಾಡಲಾದ ಮುಕ್ತ ವ್ಯಾಪಾರ ಒಪ್ಪಂದ (FTA) ಪರಿಣಾಮಕಾರಿ ಅನುಷ್ಠಾನ ಹಾಗೂ ಹೂಡಿಕೆ, ತಂತ್ರಜ್ಞಾನ, ಕೃಷಿ, ಶಿಕ್ಷಣ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ 10 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಒಟ್ಟು 18 ಮಹತ್ವದ ನಿರ್ಧಾರಗಳನ್ನು ಪ್ರಕಟಿಸಲಾಯಿತು. ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ಸಹಕಾರ ಬಲಪಡಿಸುವುದು, ನೌಕಾಪಡೆ ಹಾಗೂ ರಕ್ಷಣಾ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ವ್ಯವಸ್ಥೆ ರೂಪಿಸುವುದಕ್ಕೂ ಒಪ್ಪಿಗೆ ನೀಡಲಾಗಿದೆ. “ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪಷ್ಟ ಗುರಿ ಮತ್ತು ನಿರ್ದಿಷ್ಟ ಫಲಿತಾಂಶಗಳೊಂದಿಗೆ ಮುಂದುವರಿಯುತ್ತೇವೆ” ಎಂದು ಪ್ರಧಾನಿ ಮೋದಿ ತಿಳಿಸಿದರು.
ಜಾಗತಿಕ ಬೆಳವಣಿಗೆಗಳ ಕುರಿತೂ ಉಭಯ ನಾಯಕರು ಚರ್ಚೆ ನಡೆಸಿದರು. ಪಶ್ಚಿಮ ಏಷ್ಯಾದ ಸಂಘರ್ಷ, ಸ್ಟ್ರೈಟ್ ಆಫ್ ಹಾರ್ಮುಜ್ನಲ್ಲಿ ಮುಕ್ತ ನೌಕಾಯಾನ, ಉಕ್ರೇನ್ ಯುದ್ಧ ಹಾಗೂ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಪುನರುಚ್ಚರಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆ ಮತ್ತು ಸುಧಾರಣೆಗೆ ಭಾರತದ ಬೇಡಿಕೆಗೆ ನ್ಯೂಜಿಲೆಂಡ್ ತನ್ನ ಬೆಂಬಲವನ್ನೂ ವ್ಯಕ್ತಪಡಿಸಿದೆ.



