ಬೆಂಗಳೂರು : ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ವಿಚಾರಣೆಗೆ (ಪ್ರಾಸಿಕ್ಯೂಷನ್) ಅನುಮತಿ ನೀಡುವುದು ಸರ್ಕಾರದ ವಿವೇಚನೆಯ ವಿಷಯವಾಗಿದ್ದು, ಸಮರ್ಥನೀಯ ಹಾಗೂ ಕಾನೂನುಬದ್ಧ ಕಾರಣಗಳಿದ್ದರೆ ಮಾತ್ರ ಅನುಮತಿ ನೀಡಲಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇನ್ನೂ ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ರಾಜ್ಯ ಸರ್ಕಾರವು ವಿಚಾರಣೆಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳ ಹೆಸರನ್ನು ಆರೋಪಪಟ್ಟಿಯಿಂದ ಕೈಬಿಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತನಿಖಾ ಸಂಸ್ಥೆಗಳು ಸಲ್ಲಿಸುವ ಮನವಿಯಲ್ಲಿ ಮಾನ್ಯವಾದ ಕಾರಣಗಳಿದ್ದರೆ ಸರ್ಕಾರವು ಕಾನೂನು ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಈ ಬೆಳವಣಿಗೆ ಸುಮಾರು ಆರು ತಿಂಗಳ ಹಿಂದಿನದ್ದಾಗಿದ್ದು, ಆರೋಪ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ವೇಳೆ ನಿಗದಿತ ಕಾನೂನು ಪ್ರಕ್ರಿಯೆ ಅನುಸರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಆ ಸಮಯದಲ್ಲಿ ನಿರ್ಧಾರ ಕೈಗೊಂಡಿದ್ದರೆ ಅಗತ್ಯ ಕಾನೂನು ಕ್ರಮಗಳನ್ನು ಪಾಲಿಸಲಾಗಿರುತ್ತದೆ ಎಂಬ ವಿಶ್ವಾಸವಿದೆ ಎಂದು ಖರ್ಗೆ ಹೇಳಿದರು.
ಎಸ್‌ಐಟಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್‌ಪಿ) ಶ್ರೀಧರ್ ಕೆ.ಪೂಜಾರ್ ಹಾಗೂ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಾಜಿ ಇನ್‌ಸ್ಪೆಕ್ಟರ್‌ಗಳಾದ ಪ್ರಶಾಂತ್ ಬಾಬು ಡಿ.ಎಂ., ಚಂದ್ರಧರ್ ಎಸ್.ಆರ್. ಮತ್ತು ಲಕ್ಷ್ಮೀಕಾಂತಯ್ಯ ಅವರ ಹೆಸರನ್ನು ಸೇರಿಸಲಾಗಿಲ್ಲ. ಪ್ರಕರಣದಲ್ಲಿ ಈ ನಾಲ್ವರು ಅಧಿಕಾರಿಗಳನ್ನು ಈ ಹಿಂದೆ ಬಂಧಿಸಲಾಗಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ನಂತರ ಅವರು ಮತ್ತೆ ಸೇವೆಗೆ ಮರುನೇಮಕಗೊಂಡಿದ್ದರು. ʼ
ಬಂಧನಕ್ಕೂ ಮುನ್ನ ಶ್ರೀಧರ್ ಕೆ.ಪೂಜಾರ್ ಅವರಿಗೆ ಡಿವೈಎಸ್‌ಪಿ ಹುದ್ದೆಗೆ ಬಡ್ತಿ ನೀಡಿ ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ನಿಯೋಜಿಸಲಾಗಿತ್ತು. ಎಸ್‌ಐಟಿ, ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಜಿಸಿಐಡಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಸಂತೋಷ್ ಕುಮಾರ್ ಕೆ.ಎಸ್. ವಿರುದ್ಧ ಮಾತ್ರ ಆರೋಪಪಟ್ಟಿ ಸಲ್ಲಿಸಿದೆ.
ಪ್ರಕರಣದ ಎಫ್‌ಐಆರ್ ಪ್ರಕಾರ, ಅಂದಿನ ಸಿಸಿಬಿಯ ನಾಲ್ವರು ಅಧಿಕಾರಿಗಳು ಪ್ರಮುಖ ಆರೋಪಿ ಹಾಗೂ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ‘ಶ್ರೀಕಿ’ ಅವರನ್ನು ಕಾನೂನುಬಾಹಿರವಾಗಿ ಬಂಧನದಲ್ಲಿರಿಸಿ, ನ್ಯಾಯಾಲಯದ ಅನುಮತಿಯಿಲ್ಲದೆ ಜಿಸಿಐಡಿ ಟೆಕ್ನಾಲಜೀಸ್ ಕಚೇರಿಗೆ ಕರೆದೊಯ್ದಿದ್ದರು. ಅಲ್ಲಿ ಕೆಲವು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ಹಾಗೂ ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಒತ್ತಾಯಿಸಿದ್ದರು ಎಂಬ ಆರೋಪವಿದೆ.
ಅದೇ ವೇಳೆ ಶ್ರೀಕಿಗೆ ಖಾಸಗಿ ಲ್ಯಾಪ್‌ಟಾಪ್ ಅನ್ನು ಮುಕ್ತವಾಗಿ ಬಳಸಲು ಅವಕಾಶ ನೀಡಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.



