ಬೆಂಗಳೂರು: ಕನ್ನಡದ ಗಾನಕೋಗಿಲೆ, ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ರಾಜಕೀಯ ಹಾಗೂ ಚಿತ್ರರಂಗದ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಅವರು ಜಾನಕಿ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ, “ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ, ಕನ್ನಡ ಚಿತ್ರರಂಗದ ಮೇರುಗಾಯಕಿ, ಗಾನಕೋಗಿಲೆ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ತಮ್ಮ ಕಂಠಸಿರಿಯ ಮೂಲಕ ಕೋಟ್ಯಂತರ ಜನರ ಮನೆಮನಗಳಲ್ಲಿ ನೆಲೆಸಿದ್ದ ಬಹುಭಾಷಾ ಗಾಯಕಿಯ ಅಗಲಿಕೆಯಿಂದ ಸಂಗೀತ ಕ್ಷೇತ್ರದ ಮಹಾನ್ ಸ್ವರಮಾಧುರ್ಯ ಮೌನವಾದಂತಾಗಿದೆ. ಅನೇಕ ಗಾಯಕರನ್ನು ಪ್ರೋತ್ಸಾಹಿಸಿ ಬೆಳೆಸಿದ ಸರಳತೆಯ ಸಾಕಾರಮೂರ್ತಿಯಾಗಿದ್ದ ಜಾನಕಮ್ಮನವರ ಅಪ್ರತಿಮ ಕಂಠಸಿರಿ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಂದೆಂದಿಗೂ ಅಮರವಾಗಿರಲಿದೆ” ಎಂದು ಬರೆದು, ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡ ಸಂತಾಪ ಸೂಚಿಸಿ, “ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ಆಘಾತ ಉಂಟುಮಾಡಿದೆ. ತಮ್ಮ ಮಧುರ ಕಂಠದಿಂದ ಕೋಟ್ಯಂತರ ಸಂಗೀತಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದ ಮಹಾನ್ ಗಾಯಕಿ ಅವರು. ಮೈಸೂರಿನಲ್ಲಿ ನೆಲೆಸಿದ್ದ ಅವರು ಕನ್ನಡಿಗರಿಗೆ ಅತ್ಯಂತ ಅಚ್ಚುಮೆಚ್ಚಿನ ಕಲಾವಿದೆಯಾಗಿದ್ದರು. ಅವರ ನಿಧನ ಗಾನಲೋಕದಲ್ಲಿ ತುಂಬಲಾರದ ಶೂನ್ಯವನ್ನು ಸೃಷ್ಟಿಸಿದೆ. ಆದರೆ ಅವರು ಬಿಟ್ಟುಹೋಗಿರುವ ಸಂಗೀತ ಸಂಪತ್ತು ಎಂದೆಂದಿಗೂ ಅಮರವಾಗಿರಲಿದೆ” ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಸಹ ಎಸ್. ಜಾನಕಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಖ್ಯಾತರಾಗಿದ್ದ ಎಸ್. ಜಾನಕಿ ಅವರು ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸುಮಧುರ ಕಂಠದ ಮೂಲಕ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದರು. 17ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳಿಗೆ ದನಿಯಾಗಿರುವ ಅವರ ಕೊಡುಗೆ ಸದಾ ಸ್ಮರಣೀಯ” ಎಂದು ಅವರು ಹೇಳಿದ್ದಾರೆ.
ಎಸ್. ಜಾನಕಿ ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಕಲಾವಿದರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವಪೂರ್ಣ ನಮನ ಸಲ್ಲಿಸುತ್ತಿದ್ದು, ಅವರ ಗಾಯನ ಎಂದೆಂದಿಗೂ ಸಂಗೀತ ಲೋಕದಲ್ಲಿ ಅಮರವಾಗಿರಲಿದೆ ಎಂದು ಸ್ಮರಿಸುತ್ತಿದ್ದಾರೆ.



