ಬೆಂಗಳೂರು : ಚುನಾವಣಾ ಆಯೋಗದ ಎಸ್‌ಐಆರ್ (Special Intensive Revision) ಪ್ರಕ್ರಿಯೆಯಲ್ಲಿರುವ ಮಾನದಂಡಗಳಿಗೆ ಅನುಗುಣವಾಗಿ ಖಾಯಂ ನಿವಾಸ ಪ್ರಮಾಣಪತ್ರ (Domicile Certificate) ನೀಡಲಾಗುತ್ತಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಒಟ್ಟು 13 ದಾಖಲೆಗಳನ್ನು ಪರಿಶೀಲಿಸಲಾಗುತ್ತದದು, ಅದರಲ್ಲಿ ಅರ್ಜಿದಾರರು ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆಯೇ ಎಂಬ ಅಂಶವೂ ಸೇರಿದೆ. ಇದೇ ಹಿನ್ನೆಲೆ ಖಾಯಂ ನಿವಾಸ ಪ್ರಮಾಣಪತ್ರ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಇನ್ನೂ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಯಾವುದೇ ಜಾತಿ ಪ್ರಮಾಣಪತ್ರ ಅಥವಾ ಇತರೆ ಪ್ರಮಾಣಪತ್ರಗಳನ್ನು ನೀಡಿಲ್ಲ. ಜಾತಿ ಪ್ರಮಾಣಪತ್ರಗಳನ್ನು ರಾಜ್ಯ ಸರ್ಕಾರವೇ ನೀಡುತ್ತ ಬಂದಿದೆ. ಅದೇ ರೀತಿಯಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಖಾಯಂ ನಿವಾಸ ಪ್ರಮಾಣಪತ್ರ ನೀಡಲಾಗುತ್ತಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಬಿಜೆಪಿ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಸುಮಾರು 50 ರಿಂದ 60 ಸಾವಿರ ವಿದ್ಯಾರ್ಥಿಗಳು ಜಾತಿ ಪ್ರಮಾಣಪತ್ರದ ಕೊರತೆಯಿಂದ ಸಿಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಖಾಯಂ ನಿವಾಸ ಪ್ರಮಾಣಪತ್ರದಲ್ಲೇ ಅಗತ್ಯ ಜಾತಿ ವಿವರವನ್ನು ಉಲ್ಲೇಖಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಶಿಕ್ಷಣದಂತಹ ವಿಷಯವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಡಿಸಿಎಂ ಅಭಿಪ್ರಾಯಪಟ್ಟರು.
ಬಾಂಗ್ಲಾದೇಶದ ಪ್ರಜೆಗಳಿಗೂ ಖಾಯಂ ನಿವಾಸ ಪ್ರಮಾಣಪತ್ರ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪವನ್ನು ತಳ್ಳಿಹಾಕಿದ ಅವರು, ಇದು ಸಂಪೂರ್ಣ ಸುಳ್ಳು. ಬಾಂಗ್ಲಾದೇಶದವರ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಪೌರತ್ವ ನೀಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಅದು ಕೇಂದ್ರ ಸರ್ಕಾರದ ವಿಷಯ. ರಾಜ್ಯ ಸರ್ಕಾರ ಯಾವುದೇ ವಿದೇಶಿ ಪ್ರಜೆಗೆ ಪೌರತ್ವ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.



