Sunday, July 12, 2026
Google search engine

Homeರಾಜ್ಯಆಸ್ಪತ್ರೆಗಳ ಅವ್ಯವಸ್ಥೆಗೆ ಲೋಕಾಯುಕ್ತರ ಚಾಟಿ ; ಐವರು ಹಿರಿಯ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ

ಆಸ್ಪತ್ರೆಗಳ ಅವ್ಯವಸ್ಥೆಗೆ ಲೋಕಾಯುಕ್ತರ ಚಾಟಿ ; ಐವರು ಹಿರಿಯ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ

ಮೈಸೂರು : ನಗರದ ಕೆ.ಆರ್.ಆಸ್ಪತ್ರೆ ಮತ್ತು ಚಲುವಾಂಬ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸೇವೆಯಲ್ಲಿನ ಗಂಭೀರ ಲೋಪಗಳು ಹಾಗೂ ದುರಾಡಳಿತ ಕಂಡುಬಂದ ಹಿನ್ನೆಲೆ, ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಸೇರಿದಂತೆ ಐವರು ಹಿರಿಯ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಮಹತ್ವದ ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗೆ ಈ 2 ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಉಪ ಲೋಕಾಯುಕ್ತರು, ಆಸ್ಪತ್ರೆಗಳಲ್ಲಿನ ಅಸ್ವಚ್ಛತೆ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗದಿರುವುದು ಹಾಗೂ ಮೂಲಸೌಕರ್ಯಗಳ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್, ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಂಜುಂಡಸ್ವಾಮಿ, ನಿವಾಸಿ ವೈದ್ಯಾಧಿಕಾರಿ (ಆರ್‌ಎಂಒ) ಡಾ.ರಾಜೇಶ್ ಕುಮಾರ್, ಚಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರ ಕುಮಾರ್ ಹಾಗೂ ಆರ್‌ಎಂಒ ಡಾ.ಶಿವರಾಮ್ ಕೃಷ್ಣ ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಲು ಆದೇಶಿಸಲಾಗಿದೆ.

ಪರಿಶೀಲನೆ ವೇಳೆ ಕೆ.ಆರ್.ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಗ್ಯಾಂಗ್ರಿನ್ ಸೇರಿದಂತೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳ ಆರೈಕೆಯಲ್ಲಿ ನಿರ್ಲಕ್ಷ್ಯ ಕಂಡುಬಂದಿದ್ದು, ಹರಿದುಹೋಗಿದ್ದ ರಬ್ಬರ್ ಶೀಟ್‌ಗಳು, ರಕ್ತದ ಕಲೆಗಳಿಂದ ಕೂಡಿದ್ದ ಹಾಸಿಗೆಗಳು ಹಾಗೂ ಅಸ್ವಚ್ಛ ವಾತಾವರಣ ರೋಗಿಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿರುವುದನ್ನು ಉಪ ಲೋಕಾಯುಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಇದಲ್ಲದೆ ಸ್ಟ್ರೆಚರ್‌ಗಳು ಮತ್ತು ವ್ಹೀಲ್‌ಚೇರ್‌ಗಳು ತುಕ್ಕು ಹಿಡಿದು ಬಳಕೆಗೆ ಯೋಗ್ಯವಾಗಿರಲಿಲ್ಲ. ವಾರ್ಡ್‌ಗಳಲ್ಲಿ ಬೆಡ್‌ಶೀಟ್ ಮತ್ತು ಕಂಬಳಿಗಳ ಕೊರತೆ, ಕ್ಯಾನ್ಸರ್ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡದಿರುವುದು ಹಾಗೂ ಹೊರಗಿನ ಔಷಧ ಅಂಗಡಿಗಳಿಂದ ದುಬಾರಿ ಬೆಲೆಗೆ ಔಷಧ ಖರೀದಿಸಲು ಒತ್ತಾಯಿಸಲಾಗುತ್ತಿದೆ ಎಂಬ ಆರೋಪಗಳೂ ಪರಿಶೀಲನೆ ವೇಳೆ ಬೆಳಕಿಗೆ ಬಂದಿವೆ.

ಇನ್ನೂ ಚಲುವಾಂಬ ಆಸ್ಪತ್ರೆಯ ಹೆರಿಗೆ ವಾರ್ಡ್, ಬಾಣಂತಿಯರ ವಾರ್ಡ್ ಹಾಗೂ ಮಕ್ಕಳ ತುರ್ತು ಚಿಕಿತ್ಸಾ ಘಟಕಗಳಲ್ಲೂ ಅಸ್ವಚ್ಛತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿದೆ ಎಂದು ಉಪ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು ಬಡವರಿಗೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸ್ಥಾಪನೆಯಾಗಿವೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ರೋಗಿಗಳು ಸಂಕಷ್ಟ ಅನುಭವಿಸಬಾರದು ಎಂದು ಅವರು ತಾಕೀತು ಮಾಡಿದ್ದಾರೆ.

ಈ ಹಿನ್ನೆಲೆ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿಆರ್‌ಐ) ಡೀನ್ ಡಾ.ಕೆ.ಆರ್.ದಾಕ್ಷಾಯಣಿ ಅವರಿಗೆ ಆಸ್ಪತ್ರೆಗಳಲ್ಲಿನ ಎಲ್ಲಾ ನ್ಯೂನತೆಗಳನ್ನು ತಕ್ಷಣ ಸರಿಪಡಿಸುವಂತೆ ಸೂಚಿಸಲಾಗಿದೆ. ಕೈಗೊಂಡಿರುವ ಕ್ರಮಗಳ ಕುರಿತು 15 ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಆದೇಶಿಸಲಾಗಿದ್ದು, ಆದೇಶದ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೂ ರವಾನಿಸಲಾಗಿದೆ.

RELATED ARTICLES
- Advertisment -
Google search engine

Most Popular