ನವದೆಹಲಿ : ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸುವವರಿಗೆ ಭಾರತೀಯ ಚುನಾವಣಾ ಆಯೋಗ (ಇಸಿ) ಹೊಸ ನಿಯಮ ಜಾರಿಗೆ ತಂದಿದ್ದು, ECINET ಆನ್ಲೈನ್ ಪೋರ್ಟಲ್ನಲ್ಲಿ ಫಾರ್ಮ್-6 ಅರ್ಜಿಯಲ್ಲಿ, ಅರ್ಜಿದಾರರು ಅಥವಾ ಅವರ ಪೋಷಕರು, ಅಜ್ಜ-ಅಜ್ಜಿಯರು ಹಿಂದಿನ ವಿಶೇಷ ತೀವ್ರ ಪರಿಷ್ಕರಣೆ (SIR) ಮತದಾರರ ಪಟ್ಟಿಯ ಭಾಗವಾಗಿದ್ದರೇ ಎಂಬುದನ್ನು ಘೋಷಿಸುವುದು ಕಡ್ಡಾಯಗೊಳಿಸಲಾಗಿದೆ.
ಇನ್ನೂ ಕಳೆದ ವರ್ಷದಿಂದ 10 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಸುಮಾರು 5.58 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದ್ದು, ಹೊಸ ಬದಲಾವಣೆಯಂತೆ ECINET ಪೋರ್ಟಲ್ನ ಫಾರ್ಮ್-6ರಲ್ಲಿ ಹೊಸ ಘೋಷಣೆ ವಿಭಾಗವನ್ನು ಸೇರಿಸಲಾಗಿದೆ. ಇದರಲ್ಲಿ ಅರ್ಜಿದಾರರು ಮೂರು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗುತ್ತದೆ.
ಆಯ್ಕೆ 1: ಹಿಂದಿನ SIR ವೇಳೆ ಸಿದ್ಧಪಡಿಸಿದ ಮತದಾರರ ಪಟ್ಟಿಯಲ್ಲಿ ಅರ್ಜಿದಾರರ ಸ್ವಂತ ಹೆಸರು ಇರುವುದು.
ಆಯ್ಕೆ 2: ಹಿಂದಿನ SIR ಪಟ್ಟಿಯಲ್ಲಿ ಅರ್ಜಿದಾರರ ಪೋಷಕರು ಅಥವಾ ಅಜ್ಜ-ಅಜ್ಜಿಯರ ಹೆಸರು ಇರುವುದು.
ಆಯ್ಕೆ 3: ಹಿಂದಿನ SIR ಪಟ್ಟಿಯಲ್ಲಿ ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರ ಹೆಸರು ಇಲ್ಲದಿರುವುದು.
ಮೊದಲ ಎರಡು ಆಯ್ಕೆಗಳಲ್ಲಿ ಯಾವುದನ್ನಾದರೂ ಆರಿಸಿದರೆ, ಸಂಬಂಧಿತ ವಿಧಾನಸಭಾ ಕ್ಷೇತ್ರ, ಮತಗಟ್ಟೆ ಸಂಖ್ಯೆ ಮತ್ತು ಸರಣಿ ಸಂಖ್ಯೆಯ ವಿವರಗಳನ್ನು ನೀಡಬೇಕು. ಈ ಮಾಹಿತಿ ಲಭ್ಯವಿಲ್ಲದಿದ್ದರೆ ಮೂರನೇ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಈ ವಿಭಾಗವನ್ನು ಪೂರ್ಣಗೊಳಿಸದೆ ಅರ್ಜಿ ಸಲ್ಲಿಸಲು ಪೋರ್ಟಲ್ ಅವಕಾಶ ನೀಡುವುದಿಲ್ಲ.
ಆದರೆ, ಈ ಹೊಸ ನಿಯಮದ ಜಾರಿಗೆ ಸಂಬಂಧಿಸಿದಂತೆ ತಜ್ಞರು ಮತ್ತು ಮಾಜಿ ಚುನಾವಣಾ ಅಧಿಕಾರಿಗಳು ಪ್ರಶ್ನೆಗಳನ್ನು ಎತ್ತಿದ್ದಾರೆ. ಫಾರ್ಮ್-6ರ ಅಧಿಕೃತ ಶಾಸನಬದ್ಧ ಮಾದರಿಯಲ್ಲಿ ಯಾವುದೇ ತಿದ್ದುಪಡಿ ಮಾಡಲಾಗಿಲ್ಲ. ಹೊಸ ಘೋಷಣೆ ಕೇವಲ ಆನ್ಲೈನ್ ಪೋರ್ಟಲ್ನಲ್ಲಿ ಮಾತ್ರ ಕಾಣಿಸುತ್ತಿದ್ದು, ಆಫ್ಲೈನ್ ಅರ್ಜಿ ನಮೂನೆಯಲ್ಲಿ ಸೇರಿಸಲಾಗಿಲ್ಲ ಎಂಬುದು ಗಮನ ಸೆಳೆದಿದ್ದು, ಮತದಾರರ ನೋಂದಣಿ ನಿಯಮಗಳ ಪ್ರಕಾರ, ಅರ್ಜಿ ನಮೂನೆಯಲ್ಲಿ ಬದಲಾವಣೆ ಮಾಡಲು ಅಧಿಕೃತ ಅಧಿಸೂಚನೆ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡುತ್ತಿರುವ ಹಿನ್ನೆಲೆಯಲ್ಲಿ, ಕುಟುಂಬದ ಸದಸ್ಯರ ಹೆಸರಿನ ಆಧಾರದ ಮೇಲೆ ಹೊಸ ಮತದಾರರ ನೋಂದಣಿಗೂ ಸಮಸ್ಯೆ ಎದುರಾಗಬಹುದೇ ಎಂಬ ಆತಂಕ ವ್ಯಕ್ತವಾಗಿದೆ.
ಮತದಾರರ ಪಟ್ಟಿಯ ನಿಖರತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿರಬಹುದು. ಆದರೆ, ಇದರ ಅನುಷ್ಠಾನ ಪ್ರಕ್ರಿಯೆ ಕುರಿತು ಚರ್ಚೆ ಮುಂದುವರಿದಿದೆ.



