ಬೆಂಗಳೂರು : ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಪೊಲೀಸ್ ಘಟಕಗಳು ಪ್ರತಿ ತಿಂಗಳ ಎರಡನೇ ಭಾನುವಾರದಂದು ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದಿನ‘ ಸಭೆಗಳನ್ನು ಕಡ್ಡಾಯವಾಗಿ ನಡೆಸುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತಾಲಯಗಳು, ಜಿಲ್ಲಾ ಪೊಲೀಸ್ ಕಚೇರಿಗಳು ಹಾಗೂ ಪೊಲೀಸ್ ಠಾಣೆಗಳಲ್ಲಿ ಈ ಸಭೆಗಳು ನಿಯಮಿತವಾಗಿ ನಡೆಯಲಿವೆ. ಪರಿಶಿಷ್ಟ ಸಮುದಾಯಗಳು ಎದುರಿಸುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಸಂಬಂಧಿತ ಸಮಸ್ಯೆಗಳು, ದೌರ್ಜನ್ಯ ಪ್ರಕರಣಗಳು, ದೂರುಗಳು ಹಾಗೂ ಪೊಲೀಸ್ ಸೇವೆಗಳಿಗೆ ಸಂಬಂಧಿಸಿದ ಇತರ ವಿಚಾರಗಳನ್ನು ನೇರವಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತ್ವರಿತ ಪರಿಹಾರ ಕಲ್ಪಿಸುವುದು ಈ ಸಭೆಗಳ ಮುಖ್ಯ ಉದ್ದೇಶವಾಗಿದೆ.
ಎಲ್ಲ ಪೊಲೀಸ್ ಘಟಕಗಳು ಈ ಸಭೆಗಳನ್ನು ಕಡ್ಡಾಯವಾಗಿ ಆಯೋಜಿಸಿ, ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ (DG&IGP) ಸೂಚಿಸಿದ್ದಾರೆ.
ಈ ಕುರಿತು ನವೆಂಬರ್ 17, 2015ರಂದು ಹೊರಡಿಸಲಾಗಿದ್ದ ಸ್ಥಾಯಿ ಆದೇಶವನ್ನು ಉಲ್ಲೇಖಿಸಿರುವ ಸಚಿವರು, ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತಾಲಯಗಳು, ಜಿಲ್ಲಾ ಪೊಲೀಸ್ ಕಚೇರಿಗಳು ಹಾಗೂ ಠಾಣೆಗಳಲ್ಲಿ ಇಂತಹ ಸಭೆಗಳನ್ನು ನಡೆಸುವ ಕುರಿತು ಈಗಾಗಲೇ ಸೂಚನೆ ನೀಡಲಾಗಿತ್ತು. ಇದೀಗ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ವಿಶೇಷ ಒತ್ತು ನೀಡುವಂತೆ ನಿರ್ದೇಶನ ನೀಡಿದ್ದಾರೆ.



