Monday, July 13, 2026
Google search engine

Homeರಾಜ್ಯಕನ್ನಡ ಚಿತ್ರರಂಗ ಅವನತಿಯತ್ತ ಸಾಗುತ್ತಿದೆ : ನಿರ್ದೇಶಕ ಕೆ.ಎಂ.ಚೈತನ್ಯ ಕಳವಳ

ಕನ್ನಡ ಚಿತ್ರರಂಗ ಅವನತಿಯತ್ತ ಸಾಗುತ್ತಿದೆ : ನಿರ್ದೇಶಕ ಕೆ.ಎಂ.ಚೈತನ್ಯ ಕಳವಳ

ಬೆಂಗಳೂರು : ಕನ್ನಡ ಚಿತ್ರರಂಗದ ಪ್ರಸ್ತುತ ಸ್ಥಿತಿಗತಿ ಕುರಿತು ನಿರ್ದೇಶಕ ಕೆ.ಎಂ.ಚೈತನ್ಯ ಕಳವಳ ವ್ಯಕ್ತಪಡಿಸಿದ್ದು, ಚಿತ್ರೋದ್ಯಮ ಅವನತಿಯತ್ತ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ಚಿತ್ರವನ್ನು ನಿರ್ದೇಶಿಸಿದ್ದ ಕೆ.ಎಂ.ಚೈತನ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಮನ ಸೆಳೆದಿದ್ದಾರೆ.

ಒಂದು ಸಿನಿಮಾ ಚಿತ್ರಮಂದಿರದಲ್ಲಿ ನೋಡುವ ಅನುಭವವನ್ನು ದುಬಾರಿಯಾಗಿಸಿರುವ ಮಲ್ಟಿಪ್ಲೆಕ್ಸ್‌ಗಳು ಒಂದು ಕಡೆ, ಮನೆಯಲ್ಲೇ ಸುಲಭವಾಗಿ ಸಿನಿಮಾ ನೋಡುವ ಅವಕಾಶ ನೀಡಿರುವ OTT ವೇದಿಕೆಗಳು ಮತ್ತೊಂದು ಕಡೆ. ಈ ಬದಲಾವಣೆಗಳನ್ನು ಅರಿಯದೆ ಹಿಂದಿನಂತೆಯೇ ಹೆಚ್ಚಿನ ಸಂಭಾವನೆ ನಿರೀಕ್ಷಿಸುವ ನಟರು ಮತ್ತು ತಂತ್ರಜ್ಞರು ಇನ್ನೊಂದು ಕಡೆ ಇದ್ದಾರೆ. ಇವೆಲ್ಲವೂ ಸೇರಿ ಚಿತ್ರರಂಗದ ಮೇಲೆ ಒತ್ತಡ ತಂದಿದ್ದು, ಇದನ್ನು ತಡೆಯಲು ಎಲ್ಲರೂ ಸೇರಿ ಯೋಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಚೈತನ್ಯ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ಬಿ.ಎಸ್.ಲಿಂಗದೇವರು, ಚಿತ್ರರಂಗ ಉಳಿಯಬೇಕಾದರೆ ಎಲ್ಲ ಪಾಲುದಾರರಿಗೂ ಹೊಣೆಗಾರಿಕೆ ಇದೆ. ಒಂದು ಸಿನಿಮಾ ಮೊದಲು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ತಲುಪಬೇಕು. ನಂತರ ದೂರದರ್ಶನ, OTT, ಮೊಬೈಲ್ ಸೇರಿದಂತೆ ಇತರ ಮಾಧ್ಯಮಗಳ ಮೂಲಕ ತಲುಪುವ ವ್ಯವಸ್ಥೆ ಮುಂದುವರಿದಾಗ ಮಾತ್ರ ಚಿತ್ರೋದ್ಯಮದ ಆರ್ಥಿಕ ಚಕ್ರ ಸುಸ್ಥಿರವಾಗಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿರ್ಮಾಪಕರು ಮಾತ್ರ ಹೊಣೆಗಾರರಲ್ಲ. ಪ್ರದರ್ಶಕರು, ವಿತರಕರು, ಕಲಾವಿದರು, ತಂತ್ರಜ್ಞರು ಹಾಗೂ ಸ್ಟುಡಿಯೋಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು. ಚಿತ್ರದ ಬಜೆಟ್, ಹೂಡಿಕೆಯ ಅಪಾಯ ಮತ್ತು ವಾಣಿಜ್ಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸಂಭಾವನೆ ಮತ್ತು ಸೇವಾ ಶುಲ್ಕ ನಿಗದಿ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನೂ ಅಗತ್ಯವಿದ್ದರೆ ನಿಗದಿತ ಸಂಭಾವನೆಯ ಜೊತೆಗೆ ಚಿತ್ರದ ಯಶಸ್ಸಿಗೆ ಅನುಗುಣವಾಗಿ ಲಾಭದಲ್ಲಿ ಪಾಲುದಾರರಾಗುವ ಮಾದರಿಗಳನ್ನು ಅಳವಡಿಸಿಕೊಳ್ಳಬಹುದು. ಇದರಿಂದ ನಿರ್ಮಾಪಕರ ಮೇಲಿನ ಆರಂಭಿಕ ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಕಾರ್ಮಿಕರ ವೇತನ, ಆಹಾರ ಹಾಗೂ ಅಗತ್ಯ ನಿರ್ಮಾಣ ವೆಚ್ಚಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಉಳಿದ ಎಲ್ಲರೂ ಚಿತ್ರರಂಗದ ಭವಿಷ್ಯಕ್ಕಾಗಿ ಸಹಕಾರ, ತ್ಯಾಗ ಮನೋಭಾವ ಮತ್ತು ದೀರ್ಘದೃಷ್ಟಿ ಹೊಂದಿದರೆ ಕನ್ನಡ ಸೇರಿದಂತೆ ಭಾರತೀಯ ಸಿನಿಮಾ ಮತ್ತಷ್ಟು ಬಲಿಷ್ಠವಾಗಬಹುದು ಎಂದು ಲಿಂಗದೇವರು ಹೇಳಿದ್ದಾರೆ.

ಇದೇ ವೇಳೆ ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಕೂಡ ಪ್ರತಿಕ್ರಿಯಿಸಿ, ಕೇರಳ ಫಿಲಂ ಚೇಂಬರ್ ಮಾದರಿಯಲ್ಲಿ ಕಲಾವಿದರ ಸಂಭಾವನೆಗೆ ನಿಯಮಿತ ವ್ಯವಸ್ಥೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಲಾವಿದರ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಸಂಭಾವನೆ ನಿಗದಿಯಾಗಬೇಕು ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular