ಚಿಕ್ಕಬಳ್ಳಾಪುರ : ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಿ ಪಾಲಿಸಿದಾಗ ಮಾತ್ರ ನ್ಯಾಯಾಲಯದಿಂದ ನ್ಯಾಯ ಹಾಗೂ ನೆರವು ಪಡೆಯಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಹೇಳಿದರು.
ಜಿಲ್ಲಾ ನ್ಯಾಯಾಲಯದಲ್ಲಿ ನಡೆದ 2026ನೇ ಸಾಲಿನ ಎರಡನೇ ರಾಷ್ಟ್ರೀಯ ಮೆಗಾ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, 12ನೇ ಶತಮಾನದಲ್ಲೇ ಬಸವಾದಿ ಶರಣರು ಅನುಭವ ಮಂಟಪದ ಮೂಲಕ ನಿಷ್ಪಕ್ಷಪಾತ ನ್ಯಾಯದ ಪರಿಕಲ್ಪನೆಗೆ ಅಡಿಪಾಯ ಹಾಕಿದ್ದರು. ಬಸವಣ್ಣನವರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವ ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ನಾಗರಿಕರು ಹಕ್ಕುಗಳ ಜೊತೆಗೆ ತಮ್ಮ ಕರ್ತವ್ಯಗಳನ್ನೂ ಪಾಲಿಸಬೇಕು. ನ್ಯಾಯಾಲಯದ ಹೊರಗೆ ರಾಜಿ ಸಂಧಾನದ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಸಮಯ, ಹಣ ಹಾಗೂ ಸಂಬಂಧಗಳನ್ನು ಉಳಿಸಿಕೊಳ್ಳಬಹುದು. ಸಣ್ಣಪುಟ್ಟ ವ್ಯಾಜ್ಯಗಳನ್ನು ಪರಿಹರಿಸಲು ಲೋಕ ಅದಾಲತ್ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಬಳಿಕ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್ ಮಾತನಾಡಿ, ಆಸ್ತಿ ಮತ್ತು ಕುಟುಂಬ ಕಲಹಗಳನ್ನು ಆರಂಭದಲ್ಲೇ ಬಗೆಹರಿಸಿಕೊಂಡರೆ ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿ ತಪ್ಪುತ್ತದೆ. ವ್ಯಾಜ್ಯಗಳಿಂದ ಸಂಬಂಧಗಳು ಹಾಳಾಗುವ ಬದಲು ಸಂಧಾನಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 54,292 ಪ್ರಕರಣಗಳ ಪೈಕಿ 10,731 ಪ್ರಕರಣಗಳನ್ನು ಲೋಕ ಅದಾಲತ್‌ಗೆ ಗುರುತಿಸಲಾಗಿತ್ತು. ಅವುಗಳಲ್ಲಿ 8,096 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಇದೇ ವೇಳೆ ವ್ಯಾಜ್ಯಪೂರ್ವ ಹಂತದಲ್ಲಿದ್ದ 14,674 ಪ್ರಕರಣಗಳ ಪೈಕಿ 12,819 ಪ್ರಕರಣಗಳನ್ನು ಸಂಧಾನದ ಮೂಲಕ ಪರಿಹರಿಸಲಾಗಿದೆ. ಬ್ಯಾಂಕ್ ಸಾಲ ವಸೂಲಾತಿ, ಚೆಕ್ ಅಮಾನ್ಯ, ಸಂಚಾರ ನಿಯಮ ಉಲ್ಲಂಘನೆ, ಮರಳು ಸಾಗಣೆ ಹಾಗೂ ರಾಜಿಯಾಗಬಹುದಾದ ಅಪರಾಧ ಪ್ರಕರಣಗಳು ಸೇರಿದಂತೆ ಒಟ್ಟು ₹15.83 ಕೋಟಿ ಮೊತ್ತದ ವ್ಯವಹಾರಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ.
ಸಾಲದ ಪ್ರಕರಣಕ್ಕೆ ಲೋಕ ಅದಾಲತ್‌ನಲ್ಲಿ ಪರಿಹಾರ : ₹27 ಸಾವಿರ ಸಾಲ ಪಡೆಯುವ ವೇಳೆ ನೀಡಿದ್ದ ಖಾಲಿ ಚೆಕ್‌ನಿಂದಾಗಿ ಚೆಕ್ ಬೌನ್ಸ್ ಪ್ರಕರಣ ಎದುರಿಸಿದ್ದ ಸರ್ಕಾರಿ ಶಾಲಾ ಶಿಕ್ಷಕ ಶೇಷಗಿರಿರಾವ್ ಅವರು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣದಿಂದ ಮುಕ್ತರಾದರು. ₹3.40 ಲಕ್ಷ ಪಾವತಿಸುವ ಸಂಕಷ್ಟದಿಂದ ಪಾರಾದ ಬಳಿಕ, “ಯಾರೂ ಖಾಲಿ ಚೆಕ್ ನೀಡಿ ಸಾಲ ಪಡೆಯಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
15 ವರ್ಷಗಳ ಬಳಿಕ ಕುಟುಂಬಕ್ಕೆ ಪರಿಹಾರ : 15 ವರ್ಷಗಳ ಹಿಂದೆ ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟ ಮಂಡಿಕಲ್ ಗ್ರಾಮದ ನಯಾಜ್ ಪಾಷಾ ಅವರ ಕುಟುಂಬಕ್ಕೆ ಲೋಕ ಅದಾಲತ್‌ನಲ್ಲಿ ನ್ಯಾಯ ದೊರೆಯಿತು. ವಿಮೆಯಿಲ್ಲದ ಟ್ರ್ಯಾಕ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ₹7 ಲಕ್ಷ ಪರಿಹಾರ ನೀಡಲು ರಾಜಿ ಒಪ್ಪಂದವಾಗಿದ್ದು, ಕುಟುಂಬದ ದೀರ್ಘಕಾಲದ ಹೋರಾಟಕ್ಕೆ ತೆರೆ ಬಿದ್ದಿದೆ.
ನ್ಯಾಯಾಧೀಶರ ಕೊಠಡಿ ಬಳಿ ಮಾಟಮಂತ್ರ ಆರೋಪ : ನ್ಯಾಯಾಧೀಶರು ತಮ್ಮ ಪರವಾಗಿ ತೀರ್ಪು ನೀಡಲಿ ಎಂಬ ಉದ್ದೇಶದಿಂದ ನ್ಯಾಯಾಧೀಶರ ಕೊಠಡಿ ಬಳಿ ಬಿಳಿ ಸಾಸಿವೆ ಸೇರಿದಂತೆ ಮಾಟಮಂತ್ರಕ್ಕೆ ಬಳಸುವ ವಸ್ತುಗಳನ್ನು ಎಸೆದಿದ್ದ ಮಹಿಳೆಯನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಬಂಧಿಸಲಾಗಿದೆ ಎಂದು ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ತಿಳಿಸಿದರು.
ಮೂಢನಂಬಿಕೆಗಳಿಗೆ ಒಳಗಾಗದೆ, ಸಾಕ್ಷ್ಯಾಧಾರಗಳ ಮೂಲಕವೇ ನ್ಯಾಯ ಪಡೆಯಬೇಕು. ತಪ್ಪು ಮಾಡಿದವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.



