Monday, July 13, 2026
Google search engine

Homeರಾಜ್ಯಕೊಲ್ಲೂರು ಕ್ಷೇತ್ರಕ್ಕೆ ಸಾಕಾನೆ ದಾನಕ್ಕೆ ಕೇರಳ ಸಿಎಂಗೆ ಪತ್ರ ಬರೆದ ಸಿಎಂ ಡಿ.ಕೆ.ಶಿವಕುಮಾರ್

ಕೊಲ್ಲೂರು ಕ್ಷೇತ್ರಕ್ಕೆ ಸಾಕಾನೆ ದಾನಕ್ಕೆ ಕೇರಳ ಸಿಎಂಗೆ ಪತ್ರ ಬರೆದ ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಿಗೆ ಬಳಸಲು ಹೆಣ್ಣು ಸಾಕಾನೆ ನೀಡುವಂತೆ ಕರ್ನಾಟಕ ಸರ್ಕಾರ ಕೇರಳ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಪತ್ರ ಬರೆದು, ಕೇರಳದ ಯಾವುದೇ ದೇವಸ್ಥಾನದಿಂದ ಇಚ್ಛಾಪೂರ್ವಕವಾಗಿ ಹೆಣ್ಣು ಆನೆಯೊಂದನ್ನು ದಾನವಾಗಿ ನೀಡಲು ಅಗತ್ಯ ಸಹಕಾರ ನೀಡುವಂತೆ ಕೋರಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು ಹಾಗೂ ಉತ್ಸವಗಳಲ್ಲಿ ಭಾಗವಹಿಸಲು ಆನೆಯ ಅಗತ್ಯವಿದೆ. ಆನೆ ದಾನದ ಪ್ರಕ್ರಿಯೆಯು ಜಾರಿಯಲ್ಲಿರುವ ಎಲ್ಲ ಕಾನೂನು ಮತ್ತು ನಿಯಮಗಳಿಗೆ ಅನುಗುಣವಾಗಿಯೇ ನಡೆಯಬೇಕು ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ. ಈ ಕ್ರಮವು ಕರ್ನಾಟಕ ಮತ್ತು ಕೇರಳ ನಡುವಿನ ಶತಮಾನಗಳಷ್ಟು ಹಳೆಯ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಡಿ.ಕೆ.ಶಿವಕುಮಾರ್ ಆಶಯ ವ್ಯಕ್ತಪಡಿಸಿದ್ದಾರೆ.

ತೆಲಂಗಾಣ ಪ್ರಸ್ತಾವನೆಗೆ ಕೇರಳ ನಿರಾಕರಣೆ : ಇದಕ್ಕೂ ಮುನ್ನ ತೆಲಂಗಾಣ ಸರ್ಕಾರ ಧಾರ್ಮಿಕ ಉದ್ದೇಶಕ್ಕಾಗಿ ಕೇರಳ ಅರಣ್ಯ ಇಲಾಖೆಯ ಶಿಬಿರಗಳಲ್ಲಿ ಸಾಕಲಾಗುತ್ತಿರುವ ಆನೆಗಳನ್ನು ನೀಡುವಂತೆ ಮನವಿ ಮಾಡಿತ್ತು. ಆದರೆ ಕೇರಳ ಸರ್ಕಾರ ಆ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು ಎಂದು ತಿಳಿದುಬಂದಿದ್ದು, ಪ್ರಸ್ತುತ ಕೇರಳದ ವಿವಿಧ ಆನೆ ಶಿಬಿರಗಳಲ್ಲಿ ಸುಮಾರು 30 ಸಾಕಾನೆಗಳನ್ನು ನಿರ್ವಹಿಸಲಾಗುತ್ತಿದ್ದು, ರಾಜ್ಯಾದ್ಯಂತ ಒಟ್ಟು ಸಾಕಾನೆಗಳ ಸಂಖ್ಯೆ ಸುಮಾರು 368ರಷ್ಟಿದೆ. ಪ್ರತಿವರ್ಷ 15ರಿಂದ 20 ಆನೆಗಳು ಮೃತಪಟ್ಟಿರುವುದಾಗಿ ಅಂಕಿಅಂಶಗಳು ತಿಳಿಸುತ್ತವೆ.

ಆನೆ ವರ್ಗಾವಣೆಗೆ ಕಟ್ಟುನಿಟ್ಟಿನ ನಿಯಮ : ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ‘ಸಾಕಾನೆ (ವರ್ಗಾವಣೆ ಅಥವಾ ಸಾರಿಗೆ) ನಿಯಮಗಳು, 2024’ ಅಡಿಯಲ್ಲಿ ಅಂತರರಾಜ್ಯ ಆನೆ ವರ್ಗಾವಣೆಗೆ ಕಠಿಣ ನಿಯಮಗಳಿವೆ.

ಮಾಲೀಕತ್ವದ ಪ್ರಮಾಣಪತ್ರ ಹೊಂದಿರುವ ಹಾಗೂ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ ಮಾನಿಟರಿಂಗ್ ವ್ಯವಸ್ಥೆಯಲ್ಲಿ ಜೆನೆಟಿಕ್ ಪ್ರೊಫೈಲ್ ದಾಖಲಿಸಿರುವ ಆನೆಗಳ ವರ್ಗಾವಣೆಗೆ ಮಾತ್ರ ಅವಕಾಶವಿದೆ. ದಾನ ನೀಡುವ ರಾಜ್ಯದ ಮುಖ್ಯ ವನ್ಯಜೀವಿ ಪಾಲಕರು, ಆನೆಯ ಪ್ರಸ್ತುತ ಮಾಲೀಕರು ಅದನ್ನು ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಮತ್ತು ಹೊಸ ಸ್ಥಳದಲ್ಲಿ ಉತ್ತಮ ಆರೈಕೆ ದೊರೆಯಲಿದೆ ಎಂಬುದನ್ನು ಖಚಿತಪಡಿಸಿದ ಬಳಿಕವೇ ವರ್ಗಾವಣೆಗೆ ಅನುಮತಿ ನೀಡಬಹುದು.

ಆನೆ ದಾನ ಪ್ರಕ್ರಿಯೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ: ಕೇರಳ ಅರಣ್ಯ ಇಲಾಖೆ

ಕರ್ನಾಟಕ ಮುಖ್ಯಮಂತ್ರಿಗಳಿಂದ ಪತ್ರ ಬಂದಿರುವುದನ್ನು ಕೇರಳದ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಆದರೆ ದೇವಸ್ಥಾನಗಳಿಂದ ಆನೆ ದಾನ ಪಡೆಯುವ ಪ್ರಕ್ರಿಯೆಯನ್ನು ಆರಂಭಿಸುವುದು ಅಥವಾ ದಾನಿಗಳನ್ನು ಹುಡುಕುವುದು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಯಮಾನುಸಾರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಮಾತ್ರ ಇಲಾಖೆಯ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular