ನವದೆಹಲಿ : ಚಲಿಸುತ್ತಿದ್ದ ರೈಲಿನಲ್ಲಿ ಪೂಜೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಭಾರತೀಯ ರೈಲ್ವೆ ಸ್ಪಷ್ಟನೆ ನೀಡಿದೆ. ಪೂಜೆ ನಡೆದಿದ್ದು ಸಾಮಾನ್ಯ ಪ್ರಯಾಣಿಕರ ಬೋಗಿಯಲ್ಲಿ ಅಲ್ಲ, ಖಾಸಗಿಯಾಗಿ ಬುಕ್ ಮಾಡಿದ್ದ ಐಷಾರಾಮಿ ಸಲೂನ್ ಕೋಚ್‌ನಲ್ಲಿ ಎಂದು ಉತ್ತರ ರೈಲ್ವೆ ತಿಳಿಸಿದೆ.
ಉತ್ತರ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, ವ್ಯಕ್ತಿಯೊಬ್ಬರು ಐಆರ್‌ಸಿಟಿಸಿ ವೆಬ್‌ಸೈಟ್‌ನ ವಾಣಿಜ್ಯ ಬುಕ್ಕಿಂಗ್ ವ್ಯವಸ್ಥೆ ಮೂಲಕ ₹3 ಲಕ್ಷಕ್ಕೂ ಅಧಿಕ ಹಣ ಪಾವತಿಸಿ ಸಲೂನ್ ಕೋಚ್‌ನ್ನು ಕಾಯ್ದಿರಿಸಿದ್ದರು. ಅದರಂತೆ ಆ ಕೋಚ್‌ನ್ನು ರೈಲಿಗೆ ಜೋಡಿಸಲಾಗಿತ್ತು. ಹೀಗಾಗಿ ಅದರೊಳಗೆ ಕಾರ್ಯಕ್ರಮ ನಡೆಸಿರುವುದು ನಿಯಮಬದ್ಧವಾಗಿದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ಜುಲೈ 8ರಂದು ಐಆರ್‌ಸಿಟಿಸಿ ಮೂಲಕ ಸಲೂನ್ ಕೋಚ್ ಬುಕ್ ಮಾಡಲಾಗಿದ್ದು, ಬುಕ್ಕಿಂಗ್ ಮಾಡಿದವರು ₹3,08,580 ಮುಂಗಡ ಹಣ ಪಾವತಿಸಿದ್ದರು. ಜುಲೈ 10ರಂದು ನವದೆಹಲಿಯಿಂದ ಮುಂಬೈಗೆ ತೆರಳಿದ ರೈಲು ಸಂಖ್ಯೆ 12926 ಪಶ್ಚಿಮ್ ಎಕ್ಸ್‌ಪ್ರೆಸ್‌ಗೆ ಈ ಕೋಚ್ ಜೋಡಿಸಲಾಗಿತ್ತು. ಈ ಪ್ರಕ್ರಿಯೆಯಿಂದ ರೈಲು ಸಂಚಾರ ಅಥವಾ ಸುರಕ್ಷತೆಗೆ ಯಾವುದೇ ತೊಂದರೆ ಉಂಟಾಗಿಲ್ಲ ಎಂದು ರೈಲ್ವೆ ತಿಳಿಸಿದೆ.
ಸಲೂನ್ ಕೋಚ್ ಎಂದರೇನು?
ಸಲೂನ್ ಕೋಚ್ ಸಾಮಾನ್ಯ ರೈಲು ಬೋಗಿಗಳಿಗಿಂತ ವಿಭಿನ್ನವಾಗಿದ್ದು, ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುವ ವಿಶೇಷ ಬೋಗಿಯಾಗಿದೆ. ಇದರಲ್ಲಿ ಲಿವಿಂಗ್ ರೂಮ್, ಎರಡು ಮಲಗುವ ಕೊಠಡಿಗಳು, ಸ್ನಾನಗೃಹ, ಅಡುಗೆ ಕೋಣೆ ಹಾಗೂ ಊಟದ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳಿರುತ್ತವೆ. ಹಿಂದೆ ಬ್ರಿಟಿಷರ ಕಾಲದಲ್ಲಿ ಹಾಗೂ ಸ್ವಾತಂತ್ರ್ಯಾನಂತರ ಈ ಬೋಗಿಗಳನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರೈಲ್ವೆಯ ಹಿರಿಯ ಅಧಿಕಾರಿಗಳ ಅಧಿಕೃತ ಪ್ರಯಾಣಕ್ಕಾಗಿ ಬಳಸಲಾಗುತ್ತಿತ್ತು.
ಪ್ರಸ್ತುತ ಭಾರತೀಯ ರೈಲ್ವೆ ನಿಯಮಾನುಸಾರ ಸಾಮಾನ್ಯ ನಾಗರಿಕರಿಗೂ ವಿಶೇಷ ಸಂದರ್ಭಗಳಿಗಾಗಿ ಇವುಗಳನ್ನು ಬಾಡಿಗೆಗೆ ನೀಡುತ್ತಿದ್ದು, ಮದುವೆ, ಪ್ರವಾಸ ಅಥವಾ ವಿಶೇಷ ಕಾರ್ಯಕ್ರಮಗಳಿಗಾಗಿ ಖಾಸಗಿ ವ್ಯಕ್ತಿಗಳು ಹಣ ಪಾವತಿಸಿ ಸಂಪೂರ್ಣ ಕೋಚ್‌ನ್ನು ಕಾಯ್ದಿರಿಸಬಹುದು.
ವೈರಲ್ ವಿಡಿಯೋದಲ್ಲಿ ಏನಿತ್ತು?
ವೈರಲ್ ಆಗಿದ್ದ ವಿಡಿಯೋದಲ್ಲಿ ಚಲಿಸುತ್ತಿದ್ದ ರೈಲಿನೊಳಗೆ ಪುರೋಹಿತರು ಹಾಗೂ ಭಕ್ತರ ಗುಂಪೊಂದು ಪೂಜೆ ನಡೆಸುತ್ತಿರುವ ದೃಶ್ಯ ಕಂಡುಬಂದಿತ್ತು. ಇದನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಹಲವರು ರೈಲಿನಲ್ಲಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆಯೇ ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆ ರೈಲ್ವೆ, ಬೋಗಿ ಖಾಸಗಿ ಬುಕ್ಕಿಂಗ್ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದೆ.



