Monday, July 13, 2026
Google search engine

Homeರಾಜ್ಯತರಗತಿಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ದಂಡನೆ : ಖಾಸಗಿ ಶಾಲೆ ನಡೆಗೆ ಕನ್ನಡಿಗರ ಕಿಡಿ

ತರಗತಿಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ದಂಡನೆ : ಖಾಸಗಿ ಶಾಲೆ ನಡೆಗೆ ಕನ್ನಡಿಗರ ಕಿಡಿ

ಬೆಂಗಳೂರು : ನಗರದಲ್ಲಿ ಪರಭಾಷಿಕರ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿರುವ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಕನ್ನಡ ಮಾತನಾಡಿದ್ದಕ್ಕಾಗಿ ವಿದ್ಯಾರ್ಥಿಗೆ ಶಿಕ್ಷೆ ನೀಡಿರುವ ಆರೋಪ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಕೆಂಗೇರಿ ವ್ಯಾಪ್ತಿಯ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಕನ್ನಡದಲ್ಲಿ ಮಾತನಾಡಿದ್ದಾನೆ ಎನ್ನುವ ಕಾರಣಕ್ಕೆ ಬೋಧಕ ಸಿಬ್ಬಂದಿ ದಂಡನೆ ವಿಧಿಸಿದ್ದಾರೆ ಎನ್ನಲಾಗಿದ್ದು, ಇನ್ನು ಮುಂದೆ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಇಂಗ್ಲಿಷ್‌ನಲ್ಲಿ ಸಂಪೂರ್ಣ ನೋಟ್‌ಬುಕ್ ತುಂಬಾ ಬರೆದುಕೊಂಡು ಬರಲು ವಿದ್ಯಾರ್ಥಿಗೆ ಸೂಚನೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಮಾತೃಭಾಷೆಯಲ್ಲಿ ಮಾತನಾಡಿದ್ದಕ್ಕೆ ಶಿಕ್ಷೆ ನೀಡಿರುವುದು ಕನ್ನಡ ಭಾಷೆಗೆ ಮಾಡಿದ ಅವಮಾನ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕನ್ನಡ ಮಾತನಾಡುವುದನ್ನು ತಪ್ಪು ಎಂಬ ಭಾವನೆ ಮೂಡಿಸಿದರೆ, ಭವಿಷ್ಯದಲ್ಲಿ ಮಾತೃಭಾಷೆಯ ಬಗ್ಗೆ ಕೀಳರಿಮೆ ಬೆಳೆಯುವ ಅಪಾಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿ ಪೋಷಕರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಮತ್ತು ಶಾಲಾ ಆಡಳಿತವನ್ನು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular