ನವದೆಹಲಿ : ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೇ ವಾಟ್ಸಾಪ್ ಬಳಸಲು ಅವಕಾಶ ನೀಡುವ ಮೆಟಾ ಸಂಸ್ಥೆಯ ನೂತನ ‘ಯೂಸರ್ನೇಮ್’ ವೈಶಿಷ್ಟ್ಯಕ್ಕೆ ಭಾರತ ಸರ್ಕಾರ ಸದ್ಯಕ್ಕೆ ತಡೆ ನೀಡಿದ್ದು, ಈ ಫೀಚರ್ನಿಂದ ಆನ್ಲೈನ್ ವಂಚನೆ, ಫಿಶಿಂಗ್ ಹಾಗೂ ‘ಡಿಜಿಟಲ್ ಅರೆಸ್ಟ್’ ಸೇರಿದಂತೆ ಸೈಬರ್ ಅಪರಾಧಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಅನ್ವಯವಾಗುವ ಏಕರೂಪದ ಯೂಸರ್ನೇಮ್ ನೀತಿ ರೂಪಿಸುವ ಕುರಿತು ಚಿಂತನೆ ನಡೆಸುತ್ತಿದೆ.
ಮೆಟಾಗೆ ಕೇಂದ್ರದ ಎಚ್ಚರಿಕೆ : ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಇತ್ತೀಚೆಗೆ ಮೆಟಾಗೆ ನೋಟಿಸ್ ಜಾರಿ ಮಾಡಿ, ಫೋನ್ ನಂಬರ್ ಇಲ್ಲದೆ ವಾಟ್ಸಾಪ್ ಖಾತೆ ಸಂಪರ್ಕಿಸುವ ವ್ಯವಸ್ಥೆಯಿಂದ ಅಪರಾಧಿಗಳನ್ನು ಪತ್ತೆಹಚ್ಚುವುದು ಕಷ್ಟವಾಗಬಹುದು ಎಂದು ತಿಳಿಸಿತ್ತು. ಐಟಿ ಕಾಯ್ದೆ ಮತ್ತು ಸಂಬಂಧಿತ ನಿಯಮಗಳ ಅಡಿಯಲ್ಲಿ ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ವಿವರಣೆ ನೀಡುವಂತೆ ಮೆಟಾಗೆ ಸೂಚಿಸಲಾಗಿತ್ತು.
ಸರ್ಕಾರದೊಂದಿಗೆ ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡದಂತೆ ನಿರ್ದೇಶನ ನೀಡಲಾಗಿತ್ತು.
ಭಾರತದಲ್ಲಿ ಸದ್ಯ ಫೀಚರ್ ಲಭ್ಯವಿಲ್ಲ : ಕೇಂದ್ರದ ಸೂಚನೆಯ ಬಳಿಕ ಮೆಟಾ ಸಂಸ್ಥೆ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಚರ್ಚೆಗಳು ಪೂರ್ಣಗೊಳ್ಳುವವರೆಗೆ ಭಾರತೀಯ ಬಳಕೆದಾರರಿಗೆ ವಾಟ್ಸಾಪ್ ಯೂಸರ್ನೇಮ್ ವೈಶಿಷ್ಟ್ಯವನ್ನು ಪರಿಚಯಿಸುವುದಿಲ್ಲ ಎಂದು ಭರವಸೆ ನೀಡಿದೆ. ಮೆಟಾ ಸಲ್ಲಿಸಿರುವ ಪ್ರತಿಕ್ರಿಯೆಯನ್ನು ಸಚಿವಾಲಯ ಪರಿಶೀಲಿಸುತ್ತಿದ್ದು, ವಾಟ್ಸಾಪ್ ಸೇರಿದಂತೆ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಅನ್ವಯವಾಗುವಂತೆ ಹೊಸ ನಿಯಮಾವಳಿಗಳನ್ನು ರೂಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.



