Tuesday, July 14, 2026
Google search engine

Homeರಾಜ್ಯಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣ : ಮೆಟ್ರೋ ರೆಡ್ ಲೈನ್‌ಗಿಂತಲೂ ದುಬಾರಿ ಯೋಜನೆ

ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣ : ಮೆಟ್ರೋ ರೆಡ್ ಲೈನ್‌ಗಿಂತಲೂ ದುಬಾರಿ ಯೋಜನೆ

ಬೆಂಗಳೂರು : ಕೆ.ಆರ್.ಪುರಂನಿಂದ ಹೆಬ್ಬಾಳವರೆಗೆ ಪ್ರಸ್ತಾವಿತ 16.75 ಕಿ.ಮೀ. ಸುರಂಗ ರಸ್ತೆ ಯೋಜನೆಯ ನಿರ್ಮಾಣ ವೆಚ್ಚವು ಇದೇ ಮಾರ್ಗದ ಸಮೀಪ ಸಾಗಲಿರುವ ನಮ್ಮ ಮೆಟ್ರೋ ರೆಡ್ ಲೈನ್ ಯೋಜನೆಗಿಂತ ಹೆಚ್ಚಿನದಾಗಿದೆ ಎಂದು ವಿವರವಾದ ಯೋಜನಾ ವರದಿ (DPR) ಹೋಲಿಕೆಯಿಂದ ತಿಳಿದುಬಂದಿದೆ.

ಡಿಪಿಆರ್ ಪ್ರಕಾರ, ಟನಲ್ ರಸ್ತೆಯ ಪ್ರತಿ ಕಿಲೋಮೀಟರ್ ನಿರ್ಮಾಣ ವೆಚ್ಚ ಸುಮಾರು ₹1,061 ಕೋಟಿ ಆಗಿದ್ದರೆ, ನಮ್ಮ ಮೆಟ್ರೋ 3ಎ ಹಂತದ (ರೆಡ್ ಲೈನ್) ಯೋಜನೆಯ ಪ್ರತಿ ಕಿಲೋಮೀಟರ್ ವೆಚ್ಚ ಸುಮಾರು ₹687 ಕೋಟಿ ಆಗಿದೆ. ಸರ್ಜಾಪುರದಿಂದ ಹೆಬ್ಬಾಳದವರೆಗೆ 37.80 ಕಿ.ಮೀ. ಉದ್ದದ ಮೆಟ್ರೋ 3ಎ ಹಂತದ ಯೋಜನೆಗೆ ₹25,999 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ 23.524 ಕಿ.ಮೀ. ಎತ್ತರದ ಮಾರ್ಗ ಹಾಗೂ 14.28 ಕಿ.ಮೀ. ಭೂಗತ ಮಾರ್ಗ ನಿರ್ಮಾಣವಾಗಲಿದ್ದು, ಒಟ್ಟು 27 ನಿಲ್ದಾಣಗಳು ಇರಲಿವೆ.

ಇದಕ್ಕೆ ಹೋಲಿಸಿದರೆ, ಕೆ.ಆರ್.ಪುರಂ-ಹೆಬ್ಬಾಳ ಟನಲ್ ರಸ್ತೆ ಯೋಜನೆಯ ಅಂದಾಜು ವೆಚ್ಚ ₹17,780 ಕೋಟಿ ಆಗಿದ್ದು, ಕೇವಲ 16.75 ಕಿ.ಮೀ. ಉದ್ದದ ಈ ಯೋಜನೆಯ ಪ್ರತಿ ಕಿಲೋಮೀಟರ್ ವೆಚ್ಚ ₹1,061 ಕೋಟಿಯಾಗಿದ್ದು, ಯೋಜನೆ ಪೂರ್ಣಗೊಳ್ಳುವ ವೇಳೆಗೆ ವೆಚ್ಚವು ಸುಮಾರು ಶೇ.45ರಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಪ್ರತಿ ಕಿಲೋಮೀಟರ್ ವೆಚ್ಚವು ಸುಮಾರು ₹1,538 ಕೋಟಿಗೆ ಏರಬಹುದು ಎಂದು ಅಂದಾಜಿಸಲಾಗಿದೆ.

ನಿರ್ಮಾಣ ವೆಚ್ಚದ ಜೊತೆಗೆ ಪ್ರಯಾಣ ವೆಚ್ಚದಲ್ಲಿಯೂ ಎರಡೂ ಯೋಜನೆಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ಮೆಟ್ರೋದಲ್ಲಿ ಗರಿಷ್ಠ ಪ್ರಯಾಣ ದರ ₹90 ಇದ್ದರೆ, ಟನಲ್ ರಸ್ತೆಯಲ್ಲಿ ಹೋಗಿ-ಬರುವ ಟೋಲ್ ಶುಲ್ಕ ₹600ಕ್ಕೂ ಅಧಿಕವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇದಲ್ಲದೆ, ಟನಲ್ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳಿಗೆ ಸಂಚಾರ ಅವಕಾಶ ಇರುವುದಿಲ್ಲ. ಆದರೆ ಮೆಟ್ರೋ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಸಮೂಹ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಿದೆ. ಈ ಹಿಂದೆ ಮೆಟ್ರೋ 3ಎ ಹಂತದ ಯೋಜನೆಗೂ ಹೆಚ್ಚಿನ ವೆಚ್ಚದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. 2024ರ ಡಿಸೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟವು ₹28,405 ಕೋಟಿ ವೆಚ್ಚದೊಂದಿಗೆ ಡಿಪಿಆರ್‌ಗೆ ಅನುಮೋದನೆ ನೀಡಿತ್ತು. ಬಳಿಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಆಕ್ಷೇಪದ ಹಿನ್ನೆಲೆಯಲ್ಲಿ ಯೋಜನಾ ವೆಚ್ಚವನ್ನು ಪರಿಷ್ಕರಿಸಿ ₹25,999 ಕೋಟಿಗೆ ಇಳಿಸಲಾಯಿತು.

ಆಗ್ನೇಯ ಬೆಂಗಳೂರನ್ನು ಉತ್ತರ ಭಾಗದೊಂದಿಗೆ ಸಂಪರ್ಕಿಸುವ ಉದ್ದೇಶ ಹೊಂದಿರುವ ಎರಡೂ ಯೋಜನೆಗಳು ಒಂದೇ ಸಂಚಾರ ಮಾರ್ಗಕ್ಕೆ ಸಂಬಂಧಿಸಿದ್ದಾಗಿವೆ. ಆದರೆ, ಮೆಟ್ರೋ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಿದರೆ, ಟನಲ್ ರಸ್ತೆ ಮುಖ್ಯವಾಗಿ ವಾಹನ ಸಂಚಾರಕ್ಕಾಗಿ ರೂಪಿಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular